ಬೆಂಗಳೂರು, ಎ25(Daijiworld News/SS): ಬಿಜೆಪಿಯವರು ದಡ್ಡರು, ಅವರ ಜೊತೆ 20 ಅಲ್ಲ, 78 ಶಾಸಕರು ಇದ್ದೇವೆ ಎಂದು ಬೆಳಗಾವಿ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಕಾಂಗ್ರೆಸ್ಸಿನ 20 ಶಾಸಕರು ಬಿಜೆಪಿ ಸಂಪರ್ಕದಲ್ಲಿದ್ದಾರೆಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯವರು ತುಂಬಾ ದಡ್ಡರಿದ್ದಾರೆ. ಅವರ ಜೊತೆ 20 ಅಲ್ಲ, 78 ಶಾಸಕರು ಇದ್ದೇವೆ. ಕಲಾಪದಲ್ಲಿ ಅವರ ಜೊತೆಗೆ ಕುಳಿತುಕೊಳ್ಳುತ್ತೇವೆ, ಮಾತನಾಡುತ್ತೇವೆ. ಸಂಸಾರ ಬೇರೆ, ರಾಜಕಾರಣ ಬೇರೆ. ನಾವು ಜನರ ಮೇಲೆ ನಂಬಿಕೆ ಇಟ್ಟಿದ್ದೇವೆ. ಗಂಟೆ, ಮುಹೂರ್ತ ಇಡುವವರಲ್ಲ ಎಂದು ಸರ್ಕಾರ ಪತನಕ್ಕೆ ಹಬ್ಬ, ದಿನಗಳನ್ನು ನಿಗದಿ ಮಾಡುವ ಬಿಜೆಪಿ ವಿರುದ್ಧ ಕಿಡಿಕಾರಿದರು.
ನಾವು ಜನರ ಮೇಲೆ ನಂಬಿಕೆ ಇಟ್ಟವರು. ದಿನ, ಸಮಯ, ಗಳಿಗೆ ಎಂದು ಲೆಕ್ಕ ಹಾಕಿದವರಲ್ಲ. ಬಿಜೆಪಿಯವರು ಈಗ ಖುಷಿಯಿಂದ ಮಾತನಾಡುತ್ತಿದ್ದಾರೆ. ಮಾತನಾಡಲಿ ಬಿಡಿ. ಅವರ ಹಾಗೆ ನಮ್ಮ ಸಮಯವೂ ಬರುತ್ತದೆ. ಕಾಯುತ್ತೇವೆ ಎಂದು ಹೇಳಿದರು.
ಇದೇ ವೇಳೆ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ಹೇಳಿಕೆ ಕುರಿತು ಮಾತನಾಡಿದ ಅವರು, ಈ ಧಮ್ಕಿಗೆಲ್ಲ ಕೇರ್ ಮಾಡುವುದಿಲ್ಲ. ರಮೇಶ್ ಜಾರಕಿಹೊಳಿ ಅವರಿಗೆ ಕಾಂಗ್ರೆಸ್ ಪಕ್ಷ ಕೇಳಿದ್ದನ್ನು ಕೊಟ್ಟಿತ್ತು. ಅವರನ್ನು ಸಚಿವರನ್ನಾಗಿ ಮಾಡಲಾಗಿತ್ತು. ಅವರು ಶಾಸಕರೂ ಆಗಿದ್ದಾರೆ. ಆದರೆ ಇಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ ಎನ್ನುತ್ತಿದ್ದಾರೆ ಎಂದು ದೂರಿದರು.
ರಮೇಶ್ ಜಾರಕಿಹೊಳಿ ಅವರ ಆಸೆಯನ್ನು ಆ ಭಗವಂತ ಪೂರೈಸಲಿ ಎಂದು ಕೇಳಿಕೊಳ್ಳುತ್ತೇನೆ. ರಮೇಶ್ ಜಾರಕಿಹೊಳಿ ರಾಜೀನಾಮೆ ಧಮ್ಕಿ ಬಗ್ಗೆ ಕೇರ್ ಮಾಡಲ್ಲ ಎಂದು ಹೇಳಿದರು.