ಬೆಂಗಳೂರು,ಫೆ 02 (DaijiworldNews/ AK): ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಅವರ ದೇಶವಿರೋಧಿ ಹೇಳಿಕೆಯನ್ನು ಖಂಡಿಸುವುದಾಗಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಡಿ.ಕೆ.ಸುರೇಶ್ ಅವರು ತಮ್ಮ ಹೇಳಿಕೆ ಸಂಬಂಧ ದೇಶದ ಮುಂದೆ ಕ್ಷಮೆ ಕೇಳಬೇಕು. ವೀರಪ್ಪ ಮೊಯಿಲಿ ಅವರು ಪ್ರಧಾನಿಯವರನ್ನು ಜಾತಿಗೆ ಜೋಡಿಸಿ (ಟ್ಯಾಗ್ ಮಾಡಿ) ಮಾತನಾಡಿದ್ದಕ್ಕೆ ಈ ದೇಶದ ಜನರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ನವರು ಕುಣಿಯಲಾಗದವನಿಗೆ ನೆಲ ಡೊಂಕು ಎಂಬಂತೆ ಇದ್ದಾರೆ. 65 ವರ್ಷ ಇವರಿಗೆ ಕುಣಿಯಲು ಆಗಲೇ ಇಲ್ಲ ಎಂದು ಟೀಕಿಸಿದರು.ಕಾಂಗೆಸ್ಸಿನ ವೀರಪ್ಪ ಮೊಯಿಲಿಯವರು, ನರೇಂದ್ರ ಮೋದಿಯವರು ಬ್ರಾಹ್ಮಣರಲ್ಲ; ಅವರನ್ನು ಅಯೋಧ್ಯೆಯ ರಾಮಲಲಾ ಪ್ರಾಣ ಪ್ರತಿಷ್ಠಾಪನೆಗೆ ಹೇಗೆ ಒಳಗೆ ಬಿಟ್ಟಿದ್ದೀರಿ ಎಂದು ಕೇಳಿದ್ದಾರೆ.
ಡಿ.ಕೆ.ಸುರೇಶ್ ಅವರು ಪ್ರಮಾಣವಚನ ಸ್ವೀಕಾರ ಮಾಡಿ ಸಂಸತ್ತಿನ ಸದಸ್ಯರಾಗಿದ್ದಾರೆ. ರಾಷ್ಟ್ರದ ಐಕ್ಯತೆ ಮತ್ತು ಅಖಂಡತೆಯನ್ನು ಎತ್ತಿ ಹಿಡಿಯುವುದಾಗಿ ಹಾಗೂ ರಕ್ಷಣೆ ಮಾಡುವುದಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದರಲ್ಲದೆ, ಕಾಂಗ್ರೆಸ್ಸಿನವರು ತಮ್ಮ ಸ್ಥಿಮಿತವನ್ನು ಕಳಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.