ಬೆಂಗಳೂರು, ಫೆ 02 (DaijiworldNews/ AK): ಸ್ವಾತಂತ್ರ್ಯ ಬಂದ ಬಳಿಕ ದೇಶದ ಪ್ರತಿಯೊಬ್ಬ ಮಹಿಳೆಗೂ ಅವಕಾಶ ಲಭಿಸಬೇಕು ಮತ್ತು ಎಲ್ಲ ಸ್ತ್ರೀಯರಿಗೂ ಸಮಾನ ಹಕ್ಕು ಲಭಿಸಬೇಕೆಂದು ಕೈಂಕರ್ಯ ಮಾಡಿದವರು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.
ತುಮಕೂರಿನ ಶ್ರೀ ಸಿದ್ಧಿವಿನಾಯಕ ಕಲ್ಯಾಣ ಮಂದಿರದಲ್ಲಿ ಪಕ್ಷ ಆಯೋಜಿಸಿದ್ದ "ಶಕ್ತಿ ವಂದನಾ ಅಭಿಯಾನ" ದ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸ್ತ್ರೀಸಮಾನತೆ ಮತ್ತು ಮಹಿಳಾ ಶೋಷಣೆ ತಪ್ಪಿಸುವ ನಿಟ್ಟಿನಲ್ಲಿ ಮೋದಿಜೀ ಅವರು ನಾವೆಲ್ಲ ಹೆಮ್ಮೆ ಪಡುವಂತೆ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
2047ರಲ್ಲಿ ನಮ್ಮ ದೇಶವು ವಿಕಸಿತ ಭಾರತವಾಗಿ ಸಂಪೂರ್ಣ ಅಭಿವೃದ್ಧಿ ಹೊಂದಿದ ದೇಶವಾಗಿ ಪರಿವರ್ತನೆ ಆಗಬೇಕೆಂಬ ಸಂಕಲ್ಪದೊಂದಿಗೆ ಮೋದಿಜೀ ಅವರು ಕೆಲಸ ಮಾಡುತ್ತಿದ್ದಾರೆ ಎಂದು ವಿವರಿಸಿದರು.
ಈ ದೇಶದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಹುದ್ದೆಯನ್ನು ಒಬ್ಬ ದಲಿತ ಮಹಿಳೆ ಗೌರವಾನ್ವಿತ ದ್ರೌಪದಿ ಮುರ್ಮು ಅವರು ಅಲಂಕರಿಸಲು ಬಿಜೆಪಿ ಕಾರಣ. ದೇಶದ ಹಣಕಾಸು ಸಚಿವರ ಸ್ಥಾನವನ್ನು ಮಹಿಳೆಗೆ ಮೋದಿಜೀ ಅವರು ನೀಡಿದ್ದಾರೆ ಎಂದರಲ್ಲದೆ, ಕಾಂಗ್ರೆಸ್ ಈ ವಿಷಯದಲ್ಲಿ ಕೇವಲ ಮಾತನಾಡುತ್ತ ಬಂದಿತ್ತು ಎಂದು ಆಕ್ಷೇಪಿಸಿದರು.
ಮಹಿಳಾ ಭಾಗವಹಿಸುವಿಕೆಗೆ ಮತ್ತು ಅವರಿಗೆ ಸಮಾನ ಅವಕಾಶ ನೀಡಲು ಮೋದಿಜೀ ಮುಂದಾಗಿದ್ದಾರೆ ಎಂದರಲ್ಲದೆ, ಸ್ವಾತಂತ್ರ್ಯಾನಂತರ ಸತತ 6 ಕೇಂದ್ರ ಬಜೆಟ್ ಮಂಡಿಸಿದ ದಿಟ್ಟ ಮಹಿಳೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಎಂದು ವಿವರಿಸಿದರು.