ನವದೆಹಲಿ,ಏ 25(Daijiworld News/MSP): ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಮೂವರೇ ಜೈಶ್-ಎ-ಮೊಹಮದ್ ಉಗ್ರ ಸಂಘಟನೆಯ ಪ್ರಮುಖ ಟಾರ್ಗೆಟ್ ಎಂಬ ಸ್ಪೋಟಕ ಮಾಹಿತಿ ಹೊರಬಿದ್ದಿದೆ.
ಉತ್ತರ ಪ್ರದೇಶದ ಪೊಲೀಸರಿಗೆ ಲಭ್ಯವಾದ ಗುಪ್ತಚರ ಮಾಹಿತಿ ಪ್ರಕಾರ ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಹಿಟ್ ಲಿಸ್ಟ್ ನಲ್ಲಿ ಈ ಮೂವರು ಪ್ರಮುಖ ವ್ಯಕ್ತಿಗಳಿದ್ದಾರೆ ಎಂದು ತಿಳಿದುಬಂದಿದೆ.
ಗುಪ್ತಚರ ಮಾಹಿತಿ ಮಾತ್ರವಲ್ಲದೆ, ಉತ್ತರಪ್ರದೇಶದ ಶಾಮ್ಲಿ ಮತ್ತು ಉತ್ತಾರಖಂಡದ ರೂರ್ಕಿ ಯ ರೈಲು ನಿಲ್ದಾಣಗಳಲ್ಲಿ ಎರಡು ಪ್ರತ್ಯೇಕ ಪತ್ರ ಲಭ್ಯವಾಗಿದ್ದು, ಇದರಲ್ಲಿ ಸ್ಪೋಟದ ಮಾಹಿತಿ ಬಹಿರಂಗವಾಗಿದೆ. ಇದರಲ್ಲಿ ವಾರಣಾಸಿಯಲ್ಲಿರುವ ವಿಶ್ವನಾಥ ಮಂದಿರ, ಅಯೋಧ್ಯೆಯ ರಾಮಜನ್ಮಭೂಮಿ, ಉತ್ತರ ಪ್ರದೇಶದ ಸ್ಥಳಗಳು ರೈಲು ನಿಲ್ದಾಣ ಹಾಗೂ, ದೆಹಲಿ, ಹರಿಯಾಣದಲ್ಲೂ ಬಾಂಬ್ ಸ್ಫೋಟಗೊಳಿಸುವ ಬಗ್ಗೆ ಉಲ್ಲೇಖವಿದೆ ಎಂದು ತಿಳಿದುಬಂದಿದೆ.
ಬೆದರಿಕೆ ಹಿನ್ನಲೆಯಲ್ಲಿ ಉತ್ತರಪ್ರದೇಶದ ಎಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಪೊಲೀಸ್ ಮಹಾನಿರ್ದೇಶಕ ಓಪಿ ಸಿಂಗ್ ಅವರು ’ಹಸ್ತಾಕ್ಷರದ ಪತ್ರವೂ ಏ. 21 ರಂದು ಜೈಶ್ ಉಗ್ರ ಸಂಘಟನೆಯ ಕಮಾಂಡರ್ ಬರೆದಿದ್ದಾನೆ ’ ಎಂದು ಮಾಹಿತಿ ನೀಡಿದ್ದಾರೆ.