ಮುದ್ದೇಬಿಹಾಳ , ಫೆ 03 (DaijiworldNews/PC): ಬಿಜೆಪಿ ಜನರನ್ನು ತಪ್ಪು ದಾರಿಗೆ ಎಳೆದು ವಿವಿಧ ರೀತಿಯಲ್ಲಿ ಸುಳ್ಳುಗಳನ್ನು ಉತ್ಪಾದಿಸುತ್ತಿದೆ. ಇವರ ಸುಳ್ಳುಗಳನ್ನು ನಂಬಿ ಜನರು ಮೋಸ ಹೋಗಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಜಯಪುರ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು ನಮ್ಮ ಸರ್ಕಾರದಲ್ಲಿ ಹಣ ಇಲ್ಲ ಎಂದು ಬಿಜೆಪಿಯವರು ಸುಳ್ಳುಗಳನ್ನು ಉತ್ಪಾದಿಸುತ್ತಾ ಅಲೆಯುತ್ತಿದ್ದಾರೆ. ಹಣ ಇಲ್ಲದೆ ಗ್ಯಾರಂಟಿ ಯೋಜನೆಗಳು ಸೇರಿದಂತೆ ಇಷ್ಟೆಲ್ಲಾ ಅಭಿವೃದ್ಧಿ ಕಾರ್ಯಗಳು ಹೇಗೆ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
‘ದುಡಿಯುವವರು ಯಾರೋ, ದುಡಿದು ತಿನ್ನುವವರು ಇನ್ಯಾರೋ ಎನ್ನುವ ಪರಿಸ್ಥಿತಿ ಸಮಾಜದಲ್ಲಿತ್ತು. ಈ ತಾರತಮ್ಯ ಮತ್ತು ಮೇಲು-ಕೀಳು ಹೋಗಲಾಡಿಸಲು ಬಸವಣ್ಣರ ನೇತೃತ್ವದಲ್ಲಿ ವಚನ ಕ್ರಾಂತಿ ಶುರು ಆಯಿತು. ಈ ಕಾರಣಕ್ಕೆ ನಾನು ಬಸವಾದಿ ಶರಣರ ಅನುಯಾಯಿ. ಇವರು ಕರ್ಮ ಸಿದ್ಧಾಂತವನ್ನು ಸಂಪೂರ್ಣ ತಿರಸ್ಕರಿಸಿತು’ಎಂದು ವಿವರಿಸಿದರು.
‘ಮಾರ್ಚ್ 20 ರಂದು ನಾನು ಮುದ್ಸೇಬಿಹಾಳ ಚುನಾವಣಾ ಪ್ರಚಾರಕ್ಕೆ ಬಂದಿದ್ದೆ. ಅವತ್ತು ನಾನು ಮುದ್ದೇ ಬಿಹಾಳದಲ್ಲಿ ಕೊಟ್ಟ ಮಾತಿನಂತೆ ಎಲ್ಲಾ ಗ್ಯಾರಂಟಿಗಳನ್ನೂ ಜಾರಿ ಮಾಡಿ ನುಡಿದಂತೆ ನಡೆದಿದ್ದೇವೆ. ಮೊದಲ ಬಾರಿ ಮುಖ್ಯಮಂತ್ರಿ ಆದಾಗಲೂ ನಾನು ಕೊಟ್ಟಿದ್ದ ಎಲ್ಲ ಭರವಸೆಗಳನ್ನೂ ಈಡೇರಿಸಿ ನುಡಿದಂತೆ ನಡೆದಿದ್ಸೇವೆ. ಈಗಲೂ ಅಷ್ಟೆ. ಬಸವಾದಿ ಶರಣರು ನುಡಿದಂತೆ ನಡೆದರು. ನಾವೂ ಬಸವಾದಿ ಶರಣರ ಮಾರ್ಗದಲ್ಲಿ ನಡೆಯುತ್ತಿದ್ದೇವೆ; ಎಂದು ವಿವರಿಸಿದರು.