ಗದಗ, ಫೆ 4(DaijiworldNews/SK): ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮಂಡನೆಯಾದ ಬೆನ್ನಲ್ಲೆ ಸಂಸದ ಡಿ.ಕೆ.ಸುರೇಶ್ ಅವರು ಪ್ರತ್ಯೇಕ ರಾಷ್ಟ್ರದ ಬೇಡಿಕೆ ಇಟ್ಟಿದ್ದರು. ಇದೀಗ ಈ ವಿಚಾರವಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಲಿಂಗಾರೆಡ್ಡಿ ಅವರು, ಮಧ್ಯಂತರ ಬಜೆಟ್ ನಲ್ಲಿ ದಕ್ಷಿಣ ಭಾರತದ ಐದು ರಾಜ್ಯಗಳಿಗೆ ಕೇವಲ ₹1.8 ಲಕ್ಷ ಕೋಟಿ ನೀಡಿದೆ. ಆದರೆ, ಉತ್ತರ ಪ್ರದೇಶ ಒಂದೇ ರಾಜ್ಯಕ್ಕೆ ₹2 ಲಕ್ಷ ಕೋಟಿ ನೀಡಿದೆ. ಈ ತಾರತಮ್ಯ ಏಕೆ? ಬಜೆಟ್ನಲ್ಲಿ ಅನುದಾನ ತಾರತಮ್ಯ ಮಾಡಿದ್ದರಿಂದ ಅವರಿಗೆ ನೋವಾಗಿದೆ’ ಎಂದರು.
ಹಲವು ಪ್ರದೇಶಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ್ದರು ಕೂಡ ಕೇಂದ್ರದಿಂದ ಬಿಡಿಗಾಸು ಬಂದಿಲ್ಲ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯಿಂದ ನೊಂದು ಡಿ.ಕೆ.ಸುರೇಶ್ ಆ ರೀತಿ ಹೇಳಿದ್ದಾರೆ’ ಎಂದರು.
ಇನ್ನು ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ₹4 ಲಕ್ಷ ಕೋಟಿ ಜಿಎಸ್ಟಿ ಹೋಗುತ್ತದೆ. ಆದರೆ, ಬಜೆಟ್ನಲ್ಲಿ ಕೇವಲ ₹50 ಸಾವಿರ ಕೋಟಿ ರಾಜ್ಯಕ್ಕೆ ಮೀಸಲಿಟ್ಟಿದ್ದಾರೆ. ದೇಶ ಅಖಂಡವಾಗಿಯೇ ಇರಬೇಕು. ಆದರೆ, ನಮಗೆ ಕೊಡಬೇಕಾಗಿದ್ದು ಕೊಡಲೇಬೇಕು’ ಎಂದು ಅವರು ಒತ್ತಾಯಿಸಿದರು.