ಕೋಲ್ಕತ್ತಾ, ಫೆ 4 (DaijiworldNews/SK): ಇತ್ತೀಚಿನ ದಿನಗಳಲ್ಲಿ ಒಂದು ಕ್ಷೇತ್ರದಲ್ಲಿ ಒಳ್ಳೆ ಕೆಲಸ ಇದ್ದು, ಕೈ ತುಂಬಾ ಸಂಬಳ ಇದ್ದರಂತೂ ಅದನ್ನು ತೊರೆದು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಮುಂದಾಗುವುದು ಬಹಳ ಕಡಿಮೆ ಜನ. ಆದರೆ ಇಲ್ಲೋಬ್ಬರು ಬಹುರಾಷ್ಟ್ರಿಯ ಕಂಪನಿಯ ಕೆಲಸ ಬಿಟ್ಟು ಯುಪಿಎಸ್ ಸಿ ಪರೀಕ್ಷೆ ಬರೆದು ಮೊದಲ ಯತ್ನದಲ್ಲೆ 20ನೇ ರ್ಯಾಂಕ್ ಗಳಿಸಿದ ನೇಹಾ ಬ್ಯಾನರ್ಜಿ ಅವರ ಯಶೋಗಾಥೆ.
ಕೋಲ್ಕತ್ತಾದಲ್ಲಿ ಜನಿಸಿದ ನೇಹಾ ಬ್ಯಾನರ್ಜಿ ಅವರು ಸೌತ್ ಪಾಯಿಂಟ್ ಹೈಸ್ಕೂಲ್ ನಲ್ಲಿ ತಮ್ಮ ಶೈಕ್ಷಣಿಕ ಪ್ರಯಾಣವನ್ನು ಪ್ರಾರಂಭಿಸಿದರು. ನಂತರ ಐಐಟಿ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಖರಗ್ ಪುರದಲ್ಲಿ ಸ್ಥಾನ ಪಡೆದು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ನಲ್ಲಿ ಬಿ. ಟೆಕ್ ಪದವಿಯನ್ನು ಪಡೆದರು.
2018 ರಲ್ಲಿ ಪದವಿ ಪಡೆದ ನೇಹಾ ಅವರು ಕಾರ್ಪೊರೇಟ್ ಜಗತ್ತಿಗೆ ಕಾಲಿಟ್ಟರು. ನಂತರ ವೃತ್ತಿಜೀವನ ಆರಂಭಿಸಿದ ಇವರು ಅಡೋಬ್ನಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿ ಸೇರಿಕೊಂಡು ಅಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದರು.ಆದರೆ ಅದ್ಯಾಕೋ ಈ ಕೆಲಸ ಆಕೆಗೆ ಖುಷಿ ನೀಡಲಿಲ್ಲ. ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಬೇಕೆಂಬ ಅವರಲಿದ್ದ ತುಡಿತ ವಿದೇಶಗಳಲ್ಲಿ ಸಿಗುತ್ತಿದ್ದ ಅವಕಾಶಗಳನ್ನು ನಿರಾಕರಿಸುವಂತೆ ಮಾಡಿತು.
ಇನ್ನು ಯುಪಿಎಸ್ಸಿ ಪರೀಕ್ಷೆಯತ್ತ ಗಮನ ಹರಿಸಿದ ನೇಹಾ ಅವರು ಓದಿನಲ್ಲೂ ಮುಂದಿದ್ದ ಕಾರಣ ಪಿಎಸ್ಸಿ ಪರೀಕ್ಷೆಯಲ್ಲೂ ಅಷ್ಟೇ ಆಸಕ್ತಿ ವಹಿಸಿ ಅಭ್ಯಾಸ ಮಾಡಲು ತಯಾರಾದರೂ. ಕೋಚಿಂಗ್ ಕ್ಲಾಸ್ಗೆ ಸೇರಿದ ಇವರು ಹತ್ತಾರು ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳುತ್ತಿದ್ದರು. ಜೊತೆಗೆ ಆನ್ಲೈನ್ ಸಂಪನ್ಮೂಲಗಳನ್ನು ಹೆಚ್ಚು ಪರಿಶೀಲನೆ ಮಾಡುತ್ತಿದ್ದರು, ವಿಶೇಷವಾಗಿ ಯೂಟ್ಯೂಬ್ ಅನ್ನು ಹೆಚ್ಚಿನ ಸಮಯ ನೋಡುತ್ತಿದ್ದರು.
ಈ ಎಲ್ಲಾ ಪರಿಶ್ರಮದ ಫಲವಾಗಿ 2020 ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ ನೇಹಾ ಅವರು ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆಯಲ್ಲಿ 20ನೇ ರ್ಯಾಂಕ್ ಗಳಿಸಿ ಯಶಸ್ಸನ್ನು ಕಂಡರು.
ಇನ್ನು ನೇಹಾ ಬ್ಯಾನರ್ಜಿ ಅವರು ಪ್ರಸ್ತುತ ಪಶ್ಚಿಮ ಬಂಗಾಳದ ಕೇಡರ್ನಲ್ಲಿ ಐಎಎಸ್ ಅಧಿಕಾರಿಯಾಗಿ, ಸೇವೆ ಸಲ್ಲಿಸುತ್ತಿದ್ದಾರೆ.