ಜಮ್ಮು ಕಾಶ್ಮೀರ, ಫೆ,4 (DaijiworldNews/SK): ಉತ್ತರ ಕಾಶ್ಮೀರದಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಸಂಚಾರ ಅಸ್ತವ್ಯಸ್ಥವಾಗಿದೆ. ಈ ವೇಳೆ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಸೈನಿಕರೊಬ್ಬರು ಸಹಾಯಕ್ಕೆ ಬಂದು ಆಸ್ಪತ್ರೆಗೆ ಸೇರಿಸಲು ನೆರವಾದ ಘಟನೆ ವರದಿಯಾಗಿದೆ.
ಖಾನಬಾಲ್ನಿಂದ ಪಿಎಚ್ಸಿ ವಿಲ್ಗಾಮಾವರೆಗೆ ಭಾರೀ ಹಿಮಪಾತವಾಗಿದ್ದರಿಂದ ಸಂಚಾರ ಅಸ್ತವ್ಯಸ್ಥವಾಗಿದೆ. ಈ ಸಂದರ್ಭ ಮಹಿಳೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಭಾರೀ ಹಿಮಪಾತದ ನಡುವೆಯೂ, ಸ್ಥಳೀಯ ಆಶಾ ಕಾರ್ಯಕರ್ತೆಯರನ್ನು ಮೊದಲು ಕರೆಸಲಾಯಿತು. ಮಹಿಳೆಯ ಸ್ಥಿತಿ ಹದಗೆಡಲು ಪ್ರಾರಂಭಿಸಿದಾಗ, ಸ್ಥಳೀಯ ಆರೋಗ್ಯ ಕಾರ್ಯಕರ್ತರು ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುಬೇಕು ಎಂದು ಸ್ಥಳೀಯ ಪೊಲೀಸರಿಗೆ ಮತ್ತು ಸೈನ್ಯಕ್ಕೆ ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಸೈನಿಕರ ತುಕಡಿ ಕಾರ್ಯಾಚರಣೆ ನಡೆಸಿ, ಮಹಿಳೆಯ ಮನೆಯಿಂದ ಜಿಲ್ಲಾ ಆಸ್ಪತ್ರೆವರೆಗೆ ಮಾರ್ಗ ನಕ್ಷೆ ತಯಾರಿಸಲಾಯಿತು ಎಂದು ತಿಳಿದು ಬಂದಿದೆ.
ಮಹಿಳೆಯನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿದ ಪರಿಣಾಮ ತಾಯಿ ಮತ್ತು ಮಗು ಕ್ಷೇಮವಾಗಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಮೂಲಗಳ ಪ್ರಕಾರ ವಿಲ್ಗಮ್ ಸೇನಾ ಶಿಬಿರದ ಸೈನಿಕರು ಈ ಸಂಪೂರ್ಣ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಇದರೊಂದಿಗೆ ಕಳೆದ ಒಂದು ವಾರದಿಂದ ಸೇನೆ ನಿರಂತರವಾಗಿ ಹಿಮಪಾತದಿಂದ ಜನರನ್ನು ರಕ್ಷಿಸುತ್ತಿದ್ದು, ಈ ನಿಟ್ಟಿನಲ್ಲಿ ಸ್ಥಳೀಯರು ಸೇನೆಗೆ ಧನ್ಯವಾದ ಅರ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.