ತುಮಕೂರು, ಫೆ 04 (DaijiworldNews/AA): ಗ್ಯಾರಂಟಿಗಳ ರೂಪದಲ್ಲಿ 52,000 ಕೋಟಿ ರೂ. ಸಾರ್ವಜನಿಕ ತೆರಿಗೆ ಹಣ ಕೊಟ್ಟು ಪೋಲು ಮಾಡಿದ್ದಾರೆ. ಈಗ ಪದೇ ಪದೇ ಹಣ ಕೇಳಿಕೊಂಡು ಕಾಂಗ್ರೆಸ್ ನವರು ಕೇಂದ್ರಕ್ಕೆ ಹೋಗುತ್ತಾರೆ ಎಂದು ಶಾಸಕ ಮುನಿರತ್ನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೋಸ್ಕರ ಕಾಂಗ್ರೆಸ್ ನವರು ಕೇಂದ್ರ ಸರ್ಕಾರ ಹಣ ಕೊಟ್ಟಿಲ್ಲ ಎಂದು ನಾಟಕ ಮಾಡುತ್ತಿದ್ದಾರೆ. ಕಾಂಗ್ರೆಸ್ ತೆರಿಗೆ ಹಣವನ್ನು ದಾನ ಮಾಡುವ ಮುಂಚೆ ಯೋಚಿಸಬೇಕಿತ್ತು. ತೆರಿಗೆ ಹಣ ದಾನ ಮಾಡಿ ರಾಜ್ಯ ಅಭಿವೃದ್ಧಿಯಾಗದಂತೆ ಮಾಡಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಗ್ಯಾರಂಟಿ ಯೋಜನೆಗಳನ್ನು ಘೋಷಿಸುವ ಮುಂಚೆ ಯೋಚಿಸಬೇಕಿತ್ತು.ಯೋಚನೆ ಮಾಡದೇ ಅಧಿಕಾರದ ದಾಹಕ್ಕಾಗಿ 5 ಗ್ಯಾರಂಟಿ, 6 ಗ್ಯಾರಂಟಿ ಘೋಷಿಸಿದ್ರು. ಇಲ್ಲಿ ದಾನ ನೀಡಿ ಅಲ್ಲಿ ಭಿಕ್ಷೆ ಬೇಡಲು ಹೋಗ್ತಾರೆ. ಕಾಂಗ್ರೆಸ್ ನವರು ಕೇಂದ್ರದಿಂದ ಹಣ ಕೇಳೋದು ರಾಜ್ಯದ ಅಭಿವೃದ್ಧಿಗಾಗಿ ಅಲ್ಲ. ಕೇಂದ್ರದಿಂದ ಹಣವನ್ನು ತಂದು ಲೋಕಸಭಾ ಚುನಾವಣೆಗೆ ಮತ್ತಷ್ಟು ಗ್ಯಾರೆಂಟಿ ನೀಡಲು ಎಂದಿದ್ದಾರೆ. ಚುನಾವಣೆ ಮುಗಿದ ಬಳಿಕ ಕಾಂಗ್ರೆಸ್ ನವರು ಗ್ಯಾರಂಟಿ ನಿಲ್ಲಿಸ್ತಾರೆ ಎಂದು ಅವರು ಹೇಳಿದ್ದಾರೆ.