ಬೆಂಗಳೂರು, ಫೆ 04 (DaijiworldNews/AA): ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಭೂ ವಿಜ್ಞಾನಿ ಪ್ರತಿಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯಪುರ ಠಾಣಾ ಪೊಲೀಸರು ಬರೋಬ್ಬರಿ 600 ಪುಟಗಳ ಚಾರ್ಜ್ ಶೀಟ್ ಅನ್ನು ಕೋರ್ಟ್ ಗೆ ಸಲ್ಲಿಸಿದ್ದಾರೆ.
ಪ್ರಕರಣದ ತನಿಖೆ ಅಂತಿಮಘಟ್ಟ ತಲುಪಿದ್ದು, ಹಂತಕ ಕಿರಣ್ ವಿರುದ್ಧ ಸಾಕ್ಷ್ಯಾಧಾರಗಳನ್ನು ಒಳಗೊಂಡ 600 ಪುಟಗಳ ಚಾರ್ಜ್ ಶೀಟ್ ಅನ್ನು ಸಲ್ಲಿಸಲಾಗಿದೆ. ಇದರಲ್ಲಿ ಹತ್ಯೆಗೆ ಪೂರಕವಾದ ಮಾಹಿತಿಯನ್ನು ನೀಡಲಾಗಿದೆ.
ಚಾರ್ಜ್ ಶೀಟ್ ನಲ್ಲಿರುವ ಅಂಶಗಳು:
ಹಂತಕ ಕಿರಣ್ ನನ್ನು ಪ್ರತಿಮಾ ಅವರು ವಜಾ ಮಾಡಿದ್ದರು. ಇದೇ ದ್ವೇಷದಿಂದ ಆತ ಪ್ರತಿಮಾ ಅವರ ಕೊಲೆಗೆ ನ. 3ರಂದು ಸಂಚು ರೂಪಿಸಿದ್ದ. ಮತ್ತೆ ಪುನಃ ನ. 4ರಂದು ಹತ್ಯೆಗೆ ಸಂಚು ರೂಪಿಸಿದ್ದು, ಪ್ರತಿಮಾ ಅವರ ಮನೆ ಮೇಲೆ ಅಡಗಿ ಕುಳಿತಿದ್ದ. ಹಾಗೂ ಸಾಂಧರ್ಬಿಕ ಸಾಕ್ಷಿಗಳ ಕಲೆ, ಪೋನ್ ಲೊಕೇಷನ್ ಸಾಕ್ಷಿ, ಸಿಸಿಟಿವಿ ಸಾಕ್ಷಿಗಳ ಮಾಹಿತಿಯನ್ನು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ.
ಇನ್ನು ಕಿರಣ್ ಪ್ರತಿಮಾರನ್ನು ಕೇವಲ 8 ನಿಮಿಷದಲ್ಲಿ ಕೊಲೆ ಮಾಡಿದ್ದ. ಪ್ರತಿಮಾ ಅವರು ಮನೆಯ ಬಾಗಿಲು ತೆರೆಯುತ್ತಿದ್ದಂತೆ ಹಿಂಬಂದಿಯಿಂದ ದಾಳಿ ನಡೆಸಿ, ಮೈಮೇಲಿದ್ದ ದುಪ್ಪಟದಿಂದ ಕತ್ತು ಬಿಗಿದು ಬಳಿಕ ಚಾಕುವಿನಿಂದ ಕತ್ತುಕೊಯ್ದು ಹತ್ಯೆ ಮಾಡಿದ್ದನು. ಅಷ್ಟೇ ಅಲ್ಲದೇ ಪ್ರತಿಮಾ ಮೈಮೇಲಿದ್ದ ಚಿನ್ನದ ಬಳೆ, ಬ್ರಾಸ್ಲೈಟ್, ಮೂಗುತಿ, ಕಪಾಟಿನಲ್ಲಿದ್ದ 5 ಲಕ್ಷ ರೂಪಾಯಿ ಹಣವನ್ನು ಕದ್ದು ಪರಾರಿಯಾಗಿದ್ದನು.
ಹತ್ಯೆ ಮಾಡಿ ಚಿನ್ನ, ಹಣವನ್ನು ದೋಚಿದ ಕಿರಣ್ ಸ್ನೇಹಿತನಿಗೆ ಹಣ ಕೊಟ್ಟು ಮತ್ತಿಬ್ಬರೊಂದಿಗೆ ಮಲೈಮಹದೇಶ್ವರ ಬೆಟ್ಟಕ್ಕೆ ಪರಾರಿಯಾಗಿದ್ದನು. ಬಳಿಕ ಪೊಲೀಸರು ಆತನ ಲೊಕೇಶನ್ ಟ್ರ್ಯಾಕ್ ಮಾಡಿ ಬಂಧಿಸಿದ್ದರು. ಪ್ರಕರಣಕ್ಕೆ ಸಂಬಂಧಪಟ್ಟ ಈ ಎಲ್ಲಾ ಮಾಹಿತಿಗಳನ್ನು ಪೊಲೀಸರು ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ.