ಡೆಹ್ರಾಡೂನ್, ಫೆ 04 (DaijiworldNews/AK): ಏಕರೂಪ ನಾಗರಿಕ ಸಂಹಿತೆ ವರದಿಗೆ ಉತ್ತರಾಖಂಡ ಸಚಿವ ಸಂಪುಟ ಅನುಮೋದನೆ ನೀಡಿದೆ.ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಯುಸಿಸಿ ವರದಿಗೆ ಅನುಮೋದನೆ ನೀಡಲಾಗಿದೆ.
ಏಕರೂಪ ನಾಗರಿಕ ಸಂಹಿತೆಯ ಅಂತಿಮ ಕರಡನ್ನು ಉತ್ತರಾಖಂಡ ಮುಖ್ಯಮಂತ್ರಿ ಅವರಿಗೆ ತಜ್ಞರ ಸಮಿತಿ ಈಚೆಗೆ ಸಲ್ಲಿಸಿತ್ತು.ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ನೇತೃತ್ವದ ಐವರು ಸದಸ್ಯರ ಸಮಿತಿಯು ಈ ಕರಡನ್ನು ಸಿಎಂಗೆ ಹಸ್ತಾಂತರಿಸಿತ್ತು.
ನಾಳೆ (ಫೆ.05) ರಂದು ಆರಂಭವಾಗಲಿರುವ ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ಯುಸಿಸಿಯನ್ನು ಮಂಡಿಸಲು ಸರ್ಕಾರ ಮುಂದಾಗಿದೆ ಒಂದು ವೇಳೆ ಅಧಿವೇಶನದಲ್ಲಿ ವಿಧೇಯಕ ಅಂಗೀಕಾರವಾದರೆ ಯುಸಿಸಿ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ ಆಗಲಿದೆ.
ಏಕರೂಪ ನಾಗರಿಕ ಸಂಹಿತೆ ಎಂದರೇನು?
ಏಕರೂಪ ನಾಗರಿಕ ಸಂಹಿತೆ ಎಂದರೆ ಇಡೀ ದೇಶದಲ್ಲಿ ಪ್ರತಿಯೊಂದು ಧರ್ಮ, ಜಾತಿ, ಪಂಗಡ, ವರ್ಗಕ್ಕೆ ಒಂದೇ ನಿಯಮವಿರುವುದು. ಏಕರೂಪ ನಾಗರಿಕ ಸಂಹಿತೆಯು ಜಾತ್ಯತೀತ ಕಾನೂನಾಗಿದ್ದು, ಅದರ ಅನುಷ್ಠಾನವಾದರೆ ಬೇರೆಲ್ಲಾ ಧರ್ಮಗಳ ವೈಯಕ್ತಿಕ ಕಾನೂನುಗಳು ಅಂತ್ಯಗೊಳ್ಳುತ್ತವೆ, ಇದೀಗ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಮತ್ತು ಪಾರ್ಸಿ ಸಮುದಾಯಗಳು ವಿಭಿನ್ನ ಧಾರ್ಮಿಕ ಕಾನೂನುಗಳನ್ನು ಹೊಂದಿವೆ. ಹಿಂದೂ ಕಾನೂನು ಬುದ್ಧ, ಜೈನ ಮತ್ತು ಸಿಖ್ ಧರ್ಮಗಳ ಅನುಯಾಯಿಗಳಿಗೂ ಅನ್ವಯಿಸುತ್ತದೆ. ವಿಲ್ ಮತ್ತು ಮದುವೆಯಂತಹ ವಿಷಯಗಳಲ್ಲಿ ಈ ಕಾನೂನುಗಳನ್ನು ಪಾಲಿಸಬೇಕು.
ಬೇರೆ ರೀತಿಯಲ್ಲಿ ಹೇಳುವುದಾದರೆ, ಏಕರೂಪ ನಾಗರಿಕ ಸಂಹಿತೆ ಎಂದರೆ ಇಡೀ ದೇಶಕ್ಕೆ ಏಕರೂಪದ ಕಾನೂನಿನ ಜೊತೆಗೆ ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರದ ನಿಯಮಗಳು ಎಲ್ಲಾ ಧಾರ್ಮಿಕ ಸಮುದಾಯಗಳಿಗೆ ಒಂದೇ ಆಗಿರುತ್ತದೆ.