ನವದೆಹಲಿ, ಫೆ 05 (DaijiworldNews/ AK):ಮಥುರಾದಲ್ಲಿ ಕೃಷ್ಣ ದೇವಸ್ಥಾನವನ್ನು ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮಾಹಿತಿ ನೀಡಿದೆ.
ಉತ್ತರ ಪ್ರದೇಶದ ಮೈನ್ಪುರಿ ನಿವಾಸಿ ಅಜಯ್ ಪ್ರತಾಪ್ ಸಿಂಗ್ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಿದ ಪ್ರಶ್ನೆಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಉತ್ತರ ನೀಡಿದೆ.
1670ರಲ್ಲಿ ಕೇಶವದೇವ ದೇವಸ್ಥಾನವನ್ನು ಕೆಡವಿ ಶಾಹಿ ಈದ್ಗಾ ನಿರ್ಮಾಣವಾದ ಬಗ್ಗೆ 1920ರ ನವೆಂಬರ್ನಲ್ಲಿ ಬ್ರಿಟಿಷರು ನಡೆಸಿದ ಸರ್ವೆ ಮಾಹಿತಿ ನೀಡುವಂತೆ ಪ್ರಶ್ನೆ ಕೇಳಲಾಗಿತ್ತು.
1920 ರಲ್ಲಿ ಅಲಹಾಬಾದ್ನಿಂದ ಬ್ರಿಟಿಷರು ಪ್ರಕಟಿಸಿದ ಗೆಜೆಟ್ನಲ್ಲಿ ಲೋಕೋಪಯೋಗಿ ಇಲಾಖೆಯು ಉತ್ತರ ಪ್ರದೇಶದ ವಿವಿಧೆಡೆ 39 ಸ್ಮಾರಕಗಳ ಪಟ್ಟಿಯನ್ನು ನೀಡಿದೆ. ಈ ಪಟ್ಟಿಯಲ್ಲಿ ಕತ್ರಾ ಕೇಶವ ದೇವ್ ಭೂಮಿಯಲ್ಲಿರುವ ಶ್ರೀ ಕೃಷ್ಣ ಭೂಮಿಯನ್ನು 37ನೇ ಸ್ಥಾನದಲ್ಲಿ ಉಲ್ಲೇಖಿಸಲಾಗಿದೆ. ಹಿಂದೆ ಕತ್ರಾ ದಿಬ್ಬದ ಮೇಲೆ ಕೇಶವದೇವ್ ದೇವಸ್ಥಾನವಿತ್ತು. ಅದನ್ನು ಕೆಡವಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂದು ಉತ್ತರ ನೀಡಿದೆ.
ಕೃಷ್ಣ ಜನ್ಮಭೂಮಿ ಮುಕ್ತಿ ನ್ಯಾಸ್ ಅಧ್ಯಕ್ಷ ವಕೀಲ ಮಹೇಂದ್ರ ಪ್ರತಾಪ್ ಪ್ರತಿಕ್ರಿಯಿಸಿ, ರಾಜ್ಯಪತ್ರದಲ್ಲಿ ಉಲ್ಲೇಖವಾದ ಹಾಗೂ ಈಗ ಆರ್ಟಿಐ ಅಡಿ ನೀಡಿದ ಪ್ರಶ್ನೆಗೆ ಎಎಸ್ಐ ನೀಡಿದ ಮಾಹಿತಿಯನ್ನೇ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ನಲ್ಲಿ ಸಾಕ್ಷ್ಯವಾಗಿ ಸೇರಿಸುತ್ತೇವೆ ಎಂದು ಹೇಳಿದ್ದಾರೆ.
ಮಥುರಾದ ಕೇಶವದೇವ ದೇವಾಲಯವನ್ನು ಸುಮಾರು 5000 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ನಂಬಲಾಗುತ್ತಿದೆ. ಮಥುರಾ ಶ್ರೀಕೃಷ್ಣನ ಜನ್ಮಸ್ಥಳ. ಶ್ರೀಕೃಷ್ಣನ ಮೊಮ್ಮಕ್ಕಳಾದ ವ್ರಜ ಮತ್ತು ವ್ರಜನಾಭ ರಾಜ ಪರೀಕ್ಷಿತನ ಸಹಾಯದಿಂದ ಮಥುರಾದಲ್ಲಿ ಕೇಶದೇವ ದೇವಾಲಯವನ್ನು ನಿರ್ಮಿಸಿದರು ಎಂಬ ಕಥೆಯಿದೆ.
ಮೊಘಲ್ ರಾಜ ಔರಂಗಜೇಬ್ 1670ರಲ್ಲಿ ಕೇಶವದೇವನ ದೇವಾಲಯವನ್ನು ಕೆಡವಲು ಆದೇಶಿಸಿದ್ದ. ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿದ ನಂತರ ನಿರ್ಮಿಸಲಾದ ಮಸೀದಿಯಲ್ಲಿ ಔರಂಗಜೇಬ ಸ್ವತಃ ನಮಾಜ್ ಮಾಡಿದ್ದ ಎನ್ನಲಾಗಿದೆ.
ಮಥುರಾದ ವಿವಾದವು 13.37 ಎಕರೆ ಭೂಮಿಯ ಮಾಲೀಕತ್ವದ ಹಕ್ಕುಗಳಿಗೆ ಸಂಬಂಧಿಸಿದೆ. ಶ್ರೀ ಕೃಷ್ಣ ಜನ್ಮಭೂಮಿ 10.9 ಎಕರೆ ಜಮೀನು ಹೊಂದಿದ್ದರೆ, ಶಾಹಿ ಈದ್ಗಾ ಮಸೀದಿ ಎರಡೂವರೆ ಎಕರೆ ಜಮೀನು ಹೊಂದಿದೆ. ಪ್ರಸ್ತುತ ಈಗ ಇರುವ ಶಾಹಿ ಈದ್ಗಾ ಮಸೀದಿಯನ್ನು ಅಕ್ರಮ ಎಂದು ಘೋಷಿಸಿ ಅದನ್ನು ನೆಲಸಮಗೊಳಿಸಬೇಕು ಮತ್ತು 13.37 ಎಕರೆ ಸಂಪೂರ್ಣ ಭೂಮಿಯನ್ನು ಡಿ-ಫಾಕ್ಟೋ ಮಾಲೀಕ ಭಗವಾನ್ ಶ್ರೀಕೃಷ್ಣ ವಿರಾಜಮಾನರಿಗೆ ಹಸ್ತಾಂತರಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ.