ಬೆಂಗಳೂರು, ಫೆ 05 (DaijiworldNews/ AK): ರಾಜ್ಯ ಸರಕಾರಕ್ಕೆ ರೈತರ ಬಗ್ಗೆ ನೈಜ ಕಾಳಜಿ ಇದ್ದರೆ ಬಾಕಿ ಉಳಿಸಿದ ಹೈನುಗಾರರ ಪ್ರೋತ್ಸಾಹಧನವನ್ನು ಗೌರವಯುತವಾಗಿ ತಕ್ಷಣ ಬಿಡುಗಡೆ ಮಾಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದರು.
ಡಾಲರ್ಸ್ ಕಾಲೊನಿಯ ತಮ್ಮ ನಿವಾಸದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರದ ಧೋರಣೆಯಿಂದ ಜನರು ಮಾತ್ರವಲ್ಲ; ಜಾನುವಾರುಗಳೂ ಈ ಸರಕಾರಕ್ಕೆ ಶಾಪ ಹಾಕುತ್ತಿವೆ. ರಾಜ್ಯದ ರೈತರು, ಬಡವರ ಕೋಪವಷ್ಟೇ ಅಲ್ಲ, ಜಾನುವಾರುಗಳ ಕೋಪಕ್ಕೂ ಕೂಡ ರಾಜ್ಯ ಸರಕಾರ ಸಿಲುಕಿದೆ ಎಂದು ತಿಳಿಸಿದರು.
ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನವನ್ನು ನೀಡುತ್ತಿದ್ದರು. ಅದರ ಪರಿಣಾಮವಾಗಿ ಬಿಜೆಪಿ ಆಡಳಿತದಲ್ಲಿದ್ದಾಗ 26 ಲಕ್ಷ ಗ್ರಾಮೀಣ ರೈತರಿಂದ ಪ್ರತಿದಿನ 80-85 ಲಕ್ಷ ಲೀಟರ್ ಹಾಲು ಸಂಗ್ರಹಿಸಲಾಗುತ್ತಿತ್ತು. ಇಂದಿನ ಕಾಂಗ್ರೆಸ್ ಸರಕಾರವು ಹಾಲು ಉತ್ಪಾದಕ ರೈತರಿಗೆ 716 ಕೋಟಿ ಬಾಕಿ ಪ್ರೋತ್ಸಾಹಧನವನ್ನು ಉಳಿಸಿಕೊಂಡಿದೆ ಎಂದು ಟೀಕಿಸಿದರು.
ಇದರ ಪರಿಣಾಮವಾಗಿ 10 ಲಕ್ಷ ಲೀಟರ್ನಷ್ಟು ಹಾಲು ಸಂಗ್ರಹಣೆ ಕಡಿಮೆ ಆಗಿದೆ ಎಂದು ಹೇಳಿದರು.ಕಾಂಗ್ರೆಸ್ ಪಕ್ಷದ ಹಿರಿಯರು ಬಿಜೆಪಿ ಬಗ್ಗೆ ಟೀಕಿಸುತ್ತಾರೆ; ‘ಮಾನ ಮರ್ಯಾದೆ ಇದ್ದರೆ..’ ಎನ್ನುತ್ತಾರೆ. ನಾನು ಆ ಭಾಷೆ ಬಳಸುವುದಿಲ್ಲ. ರಾಜ್ಯ ಸರಕಾರಕ್ಕೆ ರೈತರ ಬಗ್ಗೆ ನೈಜ ಕಾಳಜಿ ಇದ್ದರೆ ಬಾಕಿ ಉಳಿಸಿದ ಹೈನುಗಾರರ ಪ್ರೋತ್ಸಾಹಧನವನ್ನು ಗೌರವಯುತವಾಗಿ ಈ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ರೈತರ ದುಡ್ಡು ಉಳಿಸಿಕೊಂಡ ಪಾಪದ ಸರಕಾರ ಎಂದು ಜನರು ಶಾಪ ಹಾಕುತ್ತಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾಜೀ ಅವರು, ಇದೇ 10ರಂದು ಬೆಂಗಳೂರಿಗೆ ಬರಲಿದ್ದಾರೆ. ಇಲ್ಲಿ ಲೋಕಸಭಾ ಕ್ಷೇತ್ರಗಳ ಕ್ಲಸ್ಟರ್ ಸಭೆಯಲ್ಲಿ ಭಾಗವಹಿಸುತ್ತಾರೆ. ನಂತರ ಕೋರ್ ಕಮಿಟಿ ಸದಸ್ಯರ ಜೊತೆ ಸಮಾಲೋಚನೆ ಮಾಡಲಿದ್ದಾರೆ. ಸರಕಾರಿ ಕಾರ್ಯಕ್ರಮವೂ ಇದೆ ಎಂದು ಕೇಳಿದ್ದೇವೆ; ಸಂಜೆ 5 ಗಂಟೆಗೆ ಸುತ್ತೂರು ಜಾತ್ರೆಯಲ್ಲೂ ಪಾಲ್ಗೊಳ್ಳುತ್ತಾರೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.