ರಾಂಚಿ, ಫೆ 05 (DaijiworldNews/MS): ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಪತ್ನಿ ಕಲ್ಪನಾ ಅವರನ್ನು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೋಮವಾರ ಭೇಟಿಯಾಗಿದ್ದಾರೆ.
ಜಾರ್ಖಂಡ್ನಲ್ಲಿ ರಚನೆಯಾಗಿರುವ ಜೆಎಂಎಂ, ಕಾಂಗ್ರೆಸ್, ಆರ್ಜೆಡಿ ಮತ್ತು ಸಿಪಿಐ(ಎಂಎಲ್) ಮೈತ್ರಿ ಸರ್ಕಾರ ವಿಧಾನಸಭೆಯಲ್ಲಿ ಬಹುಮತ ಸಾಬೀತು ಮಾಡಿದ ಕೆಲವೇ ನಿಮಿಷಗಳ ಬಳಿಕ ಹಾಗೂ ರಾಂಚಿಯ ಐತಿಹಾಸಿಕ ಶಾಹೀದ್ ಮೈದಾನದಲ್ಲಿ ಸಾರ್ವಜನಿಕ ರ್ಯಾಲಿ ಆರಂಭವಾಗುವುದಕ್ಕೆ ಕೆಲ ಹೊತ್ತಿನ ಮೊದಲು, ರಾಹುಲ್ ಅವರು ಕಲ್ಪನಾ ಸೊರೇನ್ ಅವರನ್ನು ಭೇಟಿಯಾಗಿದ್ದಾರೆ.
ರಾಹುಲ್-ಕಲ್ಪನಾ ಭೇಟಿಯ ಚಿತ್ರವನ್ನೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದ ಅಡಿ ಹೇಮಂತ್ ಸೊರೇನ್ ಬಂಧಿತರಾಗಿದ್ದು, ಇಡಿ ವಿಚಾರಣೆ ಎದುರಿಸುತ್ತಿದ್ದಾರೆ. ಇನ್ನು ತಮ್ಮ ವಿರುದ್ದ ಕೇಳಿ ಬಂದಿರುವ ಆರೋಪಗಳನ್ನು ಜೆಎಂಎಂ ನಾಯಕ ನಿರಾಕರಿಸಿದ್ದು, ಇವೆಲ್ಲವೂ ಬಿಜೆಪಿಯ ಷಡ್ಯಂತ್ರ ಎಂದು ಹೇಳಿದ್ದಾರೆ.