ನವದೆಹಲಿ, ಫೆ 5(DaijiworldNews/SK): ಇಂದು 66ನೇ ಸಾಲಿನ ಗ್ರ್ಯಾಮಿ ಅವಾರ್ಡ್ ಪ್ರಶಸ್ತಿ ಪ್ರಕಟವಾಗಿದ್ದು, ಭಾರತಕ್ಕೆ ಮೂರು ಪ್ರಶಸ್ತಿಗಳು ಸಂದಿವೆ. ಇದೀಗ ಗ್ರ್ಯಾಮಿ ಅವಾರ್ಡ್ ಮುಡಿಗೇರಿಸಿಕೊಂಡ ಸಾಧಕರಿಗೆ ಪ್ರಧಾನಿ ಮೋದಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತಂತೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಲಾಸ್ ಏಂಜಲೀಸ್ನ ಸಂಗೀತ ವೇದಿಕೆಯಲ್ಲಿ ಭಾರತ ಹೆಮ್ಮೆಪಡುವಂತೆ ಮಾಡಿದ ‘ಗ್ರ್ಯಾಮಿ ಪ್ರಶಸ್ತಿ ವಿಜೇತ ಝಾಕೀರ್ ಹುಸೇನ್, ರಾಕೇಶ್ ಚುರಾಸಿಯಾ, ಶಂಕರ್ ಮಹದೇವನ್, ಗಣೇಶ್ ರಾಜಗೋಪಾಲನ್ ಮತ್ತು ಸೆಲ್ವಗಣೇಶ್ ನಿಮಗೆ ಶುಭಾಶಯಗಳು.
ಈ ನಿಮ್ಮ ಸಾಧನೆ ಭಾರತೀಯ ಪ್ರತಿಯೊಬ್ಬ ಪ್ರಜೆಯು ಹೆಮ್ಮೆಪಡುವಂತಹ ವಿಷಯವಾಗಿದೆ. ನಿಮ್ಮಲ್ಲಿರುವ ಅಸಾಧಾರಣ ಪ್ರತಿಭೆ ಮತ್ತು ಸಂಗೀತಕ್ಕೆ ನೀವು ಪಟ್ಟ ಶ್ರಮದ ಪ್ರತೀಕವಾಗಿ ಇಂದು ಪ್ರಶಸ್ತಿಯನ್ನು ಪಡೆದುಕೊಂಡಿದ್ದೀರಿ. ಹೊಸ ಪೀಳಿಗೆಯ ಕಲಾವಿದರು ದೊಡ್ಡ ಕನಸಿನೊಂದಿಗೆ ಸಂಗೀತದಲ್ಲಿ ಸಾಧನೆ ಮಾಡಲು ಇದು ಸ್ಫೂರ್ತಿ ನೀಡುತ್ತದೆ ಎಂದು ತಿಳಿಸಿದ್ದಾರೆ.