ನವದೆಹಲಿ, ಫೆ 5(DaijiworldNews/SK): ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಗುರಿಯಾಗಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆಯ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು, ಬಿಜೆಪಿ 10 ವರ್ಷಗಳಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಕಾಂಗ್ರೆಸ್ಗೆ 100 ವರ್ಷಗಳೇ ಬೇಕಾಗಬಹುದು ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ದೇಶಕ್ಕೆ ಉತ್ತಮ ಪ್ರತಿಪಕ್ಷ ಬೇಕು ಎಂದು ನಾನು ಯಾವಾಗಲೂ ಹೇಳುತ್ತಿದ್ದೆ. ಆದರೆ ನಿಮ್ಮಲ್ಲಿ ಅನೇಕರು ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯವನ್ನು ಕಳೆದುಕೊಂಡಿರುವುದನ್ನು ನಾನು ನೋಡಿದ್ದೇನೆ. ಕಳೆದ ಬಾರಿಯೂ ಕೆಲವು ಸೀಟುಗಳು ಬದಲಾಗಿದ್ದವು. ಈ ಬಾರಿಯೂ ಸೀಟು ಬದಲಾಯಿಸಲು ಹಲವರು ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಈಗ ಅನೇಕರು ಲೋಕಸಭೆಯ ಬದಲು ರಾಜ್ಯಸಭೆಗೆ ಹೋಗಲು ಬಯಸುತ್ತಾರೆ ಎಂದು ನಾನು ಕೇಳಿದ್ದೇನೆ. ಪರಿಸ್ಥಿತಿಯನ್ನು ನಿರ್ಣಯಿಸುವ ಮೂಲಕ ಅವರು ತಮ್ಮ ಮಾರ್ಗಗಳನ್ನು ಹುಡುಕುತ್ತಿದ್ದಾರೆ ಎಂದು ವಿಪಕ್ಷಗಳಿಗೆ ಟಾಂಗ್ ಕೊಟ್ಟಿದ್ದಾರೆ.