ರಾಂಚಿ, ಫೆ 5(DaijiworldNews/SK): ಈ ಬಾರಿಯ ಲೋಕಸಭಾ ಚುನಾವಣೆಯ ನಂತರ ‘ಇಂಡಿಯಾ’ ಮೈತ್ರಿಕೂಟವು ಕೇಂದ್ರದಲ್ಲಿ ಸರ್ಕಾರ ರಚಿಸಿದರೆ ರಾಷ್ಟ್ರದಾದ್ಯಂತ ಜಾತಿ ಗಣತಿ ನಡೆಸಲಾಗುತ್ತದೆ. ಇದರೊಂದಿಗೆ ಮೀಸಲಾತಿಗೆ ಇರುವ ಶೇಕಡ 50ರ ಮಿತಿಯನ್ನು ತೆಗೆಯಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ನೀಡಿದ್ದಾರೆ.
ಈ ಬಗ್ಗೆ ರಾಂಚಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು, ಬಿಜೆಪಿಯು ಜಾರ್ಖಂಡ್ ಮುಖ್ಯಮಂತ್ರಿ ಬುಡಕಟ್ಟು ಸಮುದಾಯಕ್ಕೆ ಸೇರಿದವರಾದ ಕಾರಣ ಅಲ್ಲಿನ ಜೆಎಂಎಂ, ಕಾಂಗ್ರೆಸ್, ಆರ್ಜೆಡಿ ಮೈತ್ರಿ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿತು ಎಂದು ರಾಹುಲ್ ಆರೋಪಿಸಿದ್ದಾರೆ.
ಇನ್ನು ದಲಿತರು, ಆದಿವಾಸಿಗಳು ಮತ್ತು ಒಬಿಸಿ ಸಮುದಾಯಗಳಿಗೆ ಸೇರಿದವರನ್ನು ಜೀತದಾಳುಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಕಂಪನಿಗಳು, ಆಸ್ಪತ್ರೆಗಳು, ಶಾಲೆ–ಕಾಲೇಜುಗಳು ಮತ್ತು ನ್ಯಾಯಾಲಯಗಳಲ್ಲಿ ಈ ಸಮುದಾಯಗಳ ಜನರ ಭಾಗವಹಿಸುವಿಕೆ ಕಡಿಮೆ ಇದೆ. ಇದನ್ನು ಸರಿ ಪಡಿಸುವುದು ದೇಶದ ಮುಂದೆ ಇರುವ ಅತಿದೊಡ್ಡ ಪ್ರಶ್ನೆ. ಇನ್ನು ಕೇಂದ್ರದಲ್ಲಿ ಸರ್ಕಾರ ರಚಿಸಿದರೆ ನಮ್ಮ ಮೊದಲ ಹೆಜ್ಜೆ ದೇಶದಲ್ಲಿ ಜಾತಿ ಗಣತಿ ನಡೆಸುವುದು’ ಎಂದು ತಿಳಿಸಿದ್ದಾರೆ.