ನವದೆಹಲಿ, ಎ25(Daijiworld News/SS): ಈ ಹಿಂದೆ ಮಹಿಳೆಯರಿಗೆ ಭಾರತೀಯ ಸೇನೆಯ ಮಿಲಿಟರಿ ಪೊಲೀಸ್ ಪಡೆಯಲ್ಲಿ ಕರ್ತವ್ಯ ನಿರ್ವಹಿಸಲು ರಕ್ಷಣಾ ಸಚಿವಾಲಯವು ಅನುಮತಿ ನೀಡುವ ಮೂಲಕ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿತ್ತು.
ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಈ ಐತಿಹಾಸಿಕ ನಿರ್ಧಾರವನ್ನು ಜಾರಿಗೆ ತಂದಿದ್ದರು. ಈ ಹಿಂದೆ ಮಹಿಳೆಯರನ್ನು ಕೇವಲ ಸೇನಾ ಅಧಿಕಾರಿಗಳಾಗಿ ಆಯ್ದ ಶಾಖೆಗಳಿಗೆ ಮಾತ್ರ ನೇಮಿಸಿಕೊಳ್ಳಲಾಗುತ್ತಿತ್ತು. ಆದರೆ, ಇದೀಗ ಮಹಿಳೆಯರು ಕೂಡ ಭಾರತೀಯ ಸೇನೆಯ ಮಿಲಿಟರಿ ಪೊಲೀಸ್ ಪಡೆಯಲ್ಲಿ ಸೇವೆ ಸಲ್ಲಿಸಲು ಸರ್ಕಾರ ಅನುಮತಿ ನೀಡಿದೆ.
ಸೇನಾ ಮುಖ್ಯಸ್ಥರಾಗಿ ಜನರಲ್ ಬಿಪಿನ್ ರಾವತ್ ಅವರು ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಈ ಯೋಜನೆಗೆ ನಾಂದಿ ಹಾಡಿದ್ದರು. ಕೊನೆಗೂ ರಕ್ಷಣಾ ಇಲಾಖೆಯ ಸಮ್ಮತಿಯ ಮೇರೆಗೆ ಇದೀಗ ಈ ಯೋಜನೆ ಜಾರಿಗೆ ಬಂದಿದ್ದು, ಸೇನೆ ಸೇರಲು ಜೂನ್ 8 ರ ಒಳಗೆ ಮಹಿಳೆಯರು ಅರ್ಜಿ ಸಲ್ಲಿಸಬಹುದು.
ಭಾರತೀಯ ಸೇನೆಯ ಮಿಲಿಟರಿ ಪೊಲೀಸ್ ಪಡೆಯಲ್ಲಿ ಕರ್ತವ್ಯ ನಿರ್ವಹಿಸಲು ನೇಮಕಾತಿ ಪ್ರಕ್ರಿಯೆಯು ಆರಂಭವಾಗಿದೆ. ಇದಕ್ಕಾಗಿ ಭಾರತೀಯ ಸೈನ್ಯವು ಆನ್ ಲೈನ್ ಮೂಲಕ ನೋಂದಣಿ ಪ್ರಾರಂಭಿಸಿದೆ. ಅಪ್ಲಿಕೇಶನ್ ಪ್ರಕ್ರಿಯೆಯು ಇಂದಿನಿಂದ ಪ್ರಾರಂಭವಾಗಿ ಜೂನ್ 8, 2019 ರಂದು ಕೊನೆಗೊಳ್ಳುತ್ತದೆ ಎನ್ನಲಾಗಿದೆ.
ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಮತ್ತು ದೈಹಿಕ ಸಾಮರ್ಥ್ಯದ ಪರೀಕ್ಷೆಯನ್ನು ನಡೆಸಲಾಗುತ್ತದೆ. ಶೇ.45 ಅಥವಾ ಅದಕ್ಕಿಂತ ಹೆಚ್ಚು ಅಂಕದೊಂದಿಗೆ ಎಸ್ ಎಸ್ ಎಲ್ ಸಿ ಮುಗಿಸಿರಲೇಬೇಕು. ಪ್ರತಿ ವಿಷಯದಲ್ಲೂ ಶೇ.33 ಕ್ಕಿಂತ ಹೆಚ್ಚು ಅಂಕ ಗಳಿಸಿರಬೇಕು. ಅಭ್ಯರ್ಥಿಯ ಕನಿಷ್ಠ ಎತ್ತರ 142 ಸೆ.ಮೀ. ಗಿಂತ ಹೆಚ್ಚಿರಬೇಕು. ಹೆಚ್ಚು ತೂಕ ಹೊಂದಿರಬಾರದು ಸೇರಿದಂತೆ ಅನೇಕ ಅರ್ಹತೆಗಳಿದೆ.