ರಾಯಚೂರು, ಫೆ 06 (DaijiworldNews/MS): ಕರ್ನಾಟಕ ರಾಜ್ಯಕ್ಕೆ ಮಲತಾಯಿ ಧೋರಣೆ ತೋರಿಸುತ್ತಿರುವ ಕೇಂದ್ರ ಸರಕಾರದ ವಿರುದ್ದ ದೆಹಲಿಯಲ್ಲಿ ಫೆಬ್ರವರಿ 7 ರಂದು ನಡೆಯಲಿರುವ ಪ್ರತಿಭಟನೆಯಲ್ಲಿ ರಾಯಚೂರಿಗೆ ಏಮ್ಸ್ (AIIMS) ಮಂಜೂರು ಮಾಡದೇ ಇರುವ ಬಗ್ಗೆಯೂ ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳು ಒಕ್ಕೊರಲಿನಿಂದ ಪ್ರಸ್ತಾಪಿಸಲಿದ್ದೇವೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಹೇಳಿದ್ದಾರೆ.
ಇಂದು ರಾಯಚೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ತೆರಿಗೆ ಪಾಲಿನಲ್ಲೂ ನಷ್ಟಮಾಡಲಾಗಿದೆ. ನ್ಯಾಯಯುತವಾಗಿ ಹಂಚಿಕೆ ಆಗಬೇಕಾದ ಅನುದಾನ ನೀಡದೇ ಅನ್ಯಾಯವೆಸಗಲಾಗುತ್ತಿದೆ. ಅಲ್ಲದೆ ಬರ ಘೋಷಣೆ ಮಾಡಲಾಗಿದ್ದರೂ ಅದಕ್ಕೆ ಪರಿಹಾರ ನೀಡಲಾಗಿಲ್ಲ. ಈ ಹಿನ್ನಲೆಯಲ್ಲಿ ಕೇಂದ್ರ ಸರಕಾರದ ವಿರುದ್ದ ಫೆ.೭ ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಪ್ರತಿಭಟನೆಯಲ್ಲಿ ನಾನೂ ಪಾಲ್ಗೊಳ್ಳಲಿದ್ದೇನೆ ಎಂದರು.
ಅಲ್ಲದೇ ಈ ಪ್ರತಿಭಟನೆಯಲ್ಲಿ ಬಹುದಿನಗಳ ಬೇಡಿಕೆಯಾಗಿರುವ ರಾಯಚೂರು ನಗರದಲ್ಲೇ ಏಮ್ಸ್ (AIIMS) ಸ್ಥಾಪನೆಯ ಬಗ್ಗೆಯೂ ಕಲ್ಯಾಣ ಕರ್ನಾಟಕ ಭಾಗದ ಜನಪ್ರತಿನಿಧಿಗಳು ಪ್ರಸ್ತಾಪಿಸಲಿದ್ದೇವೆ. ರಾಯಚೂರು ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ ಒಂದಾಗಿದ್ದು, ಭಾರತೀಯ ಸಂವಿಧಾನದ 371(ಜೆ) ವಿಧಿಯಲ್ಲಿನ ವಿಶೇಷ ನಿಬಂಧನೆಯ ಅಡಿಯಲ್ಲಿ ಒಳಗೊಳ್ಳುತ್ತದೆ, ಆರೋಗ್ಯ, ಶಿಕ್ಷಣ ಮತ್ತು ತಲಾ ಆದಾಯದ ಮಟ್ಟಗಳು ಕರ್ನಾಟಕದ ಇತರ ಪ್ರದೇಶಗಳಿಗೆ ಹೋಲಿಸಿದರೆ ಇನ್ನೂ ಕೆಳಮಟ್ಟದಲ್ಲಿರುತ್ತವೆ. ನಂಜುಂಡಪ್ಪ ವರದಿಯ ಅನ್ವಯ ರಾಯಚೂರು ನಗರಕ್ಕೆ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಯನ್ನು ಸ್ಥಾಪಿಸುವಂತೆ ಶಿಫಾರಸ್ಸು ಮಾಡಲಾಗಿತ್ತು.
ಈ ಶಿಫಾರಸ್ಸಿನ ಹಿನ್ನಲೆಯಲ್ಲಿ, ಕರ್ನಾಟಕ ರಾಜ್ಯಕ್ಕೆ ಏಮ್ಸ್ (AIIMS) ಮಂಜೂರು ಮಾಡುವ ಭರವಸೆಯನ್ನ ಕೇಂದ್ರ ಸರಕಾರ ನೀಡಿದ ಸಂಧರ್ಭದಲ್ಲಿ, ರಾಯಚೂರು ನಗರದಲ್ಲೇ ಏಮ್ಸ್ (AIIMS) ಸ್ಥಾಪಿತವಾಗಬೇಕು ಎನ್ನುವ ಬೇಡಿಕೆಯೂ ಹೆಚ್ಚಾಯಿತು. ಈ ಬಗ್ಗೆ ಒಪ್ಪಿಗೆಯನ್ನು ನೀಡಿ ರಾಜ್ಯ ಸರಕಾರ ಹಲವಾರು ಬಾರಿ ಕೇಂದ್ರ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದೆ. ಆಗಸ್ಟ್ ತಿಂಗಳಲ್ಲಿ ನಾನು ಹಾಗೂ ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಏಮ್ಸ್ (AIIMS) ಹೋರಾಟ ಸಮಿತಿಯ ಸದಸ್ಯರುಗಳು, ಜನಪ್ರತಿನಿಧಿಗಳು ಹಾಗೂ ಸಂಸದರನ್ನ ಒಳಗೊಂಡ ತಂಡ ದೆಹಲಿಗೆ ಭೇಟಿ ನೀಡಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಭೇಟಿಯಾಗಿ ನಮ್ಮ ರಾಜ್ಯದ ಆಶಯವನ್ನ ತಿಳಿಸಿದ್ದೇವು. ರಾಜ್ಯ ಸರಕಾರ ಎಲ್ಲಾ ಅಗತ್ಯ ಸಹಕಾರ ನೀಡುವ ಭರವಸೆಯನ್ನೂ ನೀಡಿದ್ದೇವು. ಆದರೆ, ಕೇಂದ್ರ ಸರಕಾರ ಕಲ್ಯಾಣ ಕರ್ನಾಟಕದ ಮೇಲೆ ಮಲತಾಯಿ ಧೋರಣೆಯನ್ನು ಮುಂದುವರೆಸಿದೆ. ಈ ಬಾರಿ ಆಯವ್ಯಯಕ್ಕೂ ಮುನ್ನ ಸನ್ಮಾನ್ಯ ಮುಖ್ಯಮಂತ್ರಿಗಳು ಕಲ್ಯಾಣ ಕರ್ನಾಟಕ ಜನರ ಆಶೋತ್ತರಗಳಿಗೆ ಧ್ವನಿಯಾಗಿ, ವಿತ್ತ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರವನ್ನು ಬರೆದು ಮನವಿ ಮಾಡಿದರು. ಅದಕ್ಕೂ ಮುನ್ನ 2 ಪತ್ರಗಳನ್ನು ಬರೆದಿದ್ದನ್ನ ಇಲ್ಲಿ ನೆನಪಿಸಿಕೊಳ್ಳಬಹುದು ಎಂದರು.