ವಾರಾಣಸಿ, ಎ25(Daijiworld News/SS): ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುತ್ತಿರುವ ಉತ್ತರಪ್ರದೇಶದ ವಾರಾಣಸಿ ಕ್ಷೇತ್ರದಿಂದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸ್ಪರ್ಧಿಸುತ್ತಿಲ್ಲ ಎಂದು ತಿಳಿದುಬಂದಿದೆ.
ಎಐಸಿಸಿ ರಾಹುಲ್ ಗಾಂಧಿ ಅವರು ವಾರಣಾಸಿಯಿಂದ ಪ್ರಿಯಾಂಕಾ ವಾದ್ರಾ ಸ್ಪರ್ಧಿಸುವುದಿಲ್ಲ ಎಂಬ ಘೋಷಣೆ ಮಾಡಿದ್ದಾರೆ. ಹೀಗಾಗಿ ಜನರ ಕುತೂಹಲಕ್ಕೆ ತೆರೆ ಬಿದ್ದಂತಾಗಿದೆ.
ಇಲ್ಲಿ ತನಕವೂ ಮೋದಿ ಅವರ ವಿರುದ್ಧ ನೆಹರು ಕುಟುಂಬದ ಕುಡಿ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಹೋದರಿ ಪ್ರಿಯಾಂಕಾ ವಾದ್ರಾ ಸ್ಪರ್ಧಿಸುತ್ತಾರೆ ಎಂಬ ವದಂತಿ ಹರಿದಾಡುತ್ತಲೇ ಇತ್ತು. ಹೀಗಾಗಿ ಜನ ಕೂಡ ಕುತೂಹಲದ ನೋಟ ಬೀರಿದ್ದರು.
ಈ ಹಿಂದೆ ಪಕ್ಷದ ಅಧ್ಯಕ್ಷ (ರಾಹುಲ್ ಗಾಂಧಿ) ಬಯಸಿದರೆ ನಾನು ಮೋದಿ ವಿರುದ್ಧ ವಾರಾಣಸಿಯಿಂದ ಕಣಕ್ಕಿಳಿಯುವುದಾಗಿ ಪ್ರಿಯಾಂಕಾ ಹೇಳಿದ್ದರು. ಆದರೆ ಇದೀಗ ಕಾಂಗ್ರೆಸ್ ಅಜಯ್ ರಾಯ್ ಅವರಿಗೆ ವಾರಾಣಾಸಿಯಿಂದ ಟಿಕೆಟನ್ನು ನೀಡಿದೆ.
2014ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ 371,784 ಮತಗಳ ಅಂತರದಿಂದ ಗೆದ್ದಿದ್ದರು. ಮೋದಿ 5,81,022 ಮತಗಳನ್ನು ಪಡೆದರೆ ಆಪ್ ಮುಖ್ಯಸ್ಥ ಕೇಜ್ರಿವಾಲ್ 2,09,238, ಅಜಯ್ ರಾಯ್ 75,614 ಮತಗಳನ್ನು ಪಡೆದಿದ್ದರು. ಒಟ್ಟು 10,30,685 ಮಂದಿ ಮತವನ್ನು ಚಲಾವಣೆ ಮಾಡಿದ್ದರು.