ರಾಯಚೂರು, ಎ25(Daijiworld News/SS): ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು ಆತ್ಮಹತ್ಯೆ ಆಗಿರದೇ ವ್ಯವಸ್ಥಿತ ಕೊಲೆಯಾಗಿದ್ದು, ಈ ಕೃತ್ಯಕ್ಕೆ ಕಾರಣರಾದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸಾವಿರಾರು ವಿದ್ಯಾರ್ಥಿಗಳು ಆಗ್ರಹಿಸಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದ್ದಾರೆ.
ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಸಂಶಯಾಸ್ಪದ ಸಾವು ಪ್ರಕರಣದ ನಿಷ್ಪಕ್ಷಪಾತ ತನಿಖೆ ಹಾಗೂ ನ್ಯಾಯಕ್ಕಾಗಿ ಆಗ್ರಹಿಸಿ ವಿಶ್ವಕರ್ಮ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪೊಲೀಸರ ಮೇಲೆ ಚಪ್ಪಲಿ ಮತ್ತು ಕಲ್ಲು ತೂರಾಟ ನಡೆಸಿರುವ ಬಗ್ಗೆ ವರದಿಯಾಗಿದೆ.
ಪ್ರತಿಭಟನಾ ರ್ಯಾಲಿ ಡಿಸಿ ಕಚೇರಿ ತಲುಪುತ್ತಿದ್ದಂತೆ ಪ್ರತಿಭಟನೆ ನಿರತ ವಿದ್ಯಾರ್ಥಿಗಳು ಕಚೇರಿಗೆ ನುಗ್ಗಲು ಯತ್ನಿಸಿದ್ದು, ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಇದೇ ವೇಳೆ ಕೆಲ ಕಿಡಿಗೇಡಿಗಳು ವಾಟರ್ ಪ್ಯಾಕೇಟ್ ಮತ್ತು ಚಪ್ಪಲಿ ತೂರಿ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ.
ಪರಿಸ್ಥಿತಿ ನಿಭಾಯಿಸಲು ಹರಸಾಹಸ ಪಟ್ಟ ಪೊಲೀಸರು, ಚಪ್ಪಲಿ ತೂರಿದವರನ್ನು ಬಂಧಿಸಿದ್ದಾರೆ. ಇದೇ ವೇಳೆ ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಗುರು ವಿಶ್ವಕರ್ಮ ಅವರ ಕಲೇಟು ಬಿದ್ದಿದ್ದು, ತಲೆಗೆ ಗಂಭೀರ ಗಾಯವಾಗಿದೆ.
ವಿದ್ಯಾರ್ಥಿಗಳು ನಗರದ ಮಾಣಿಕ ಪ್ರಭು ದೇವಸ್ಥಾನದಿಂದ ಡಿಸಿ ಕಚೇರಿವರೆಗೆ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಬೃಹತ್ ಪ್ರತಿಭಟನೆಯಲ್ಲಿ ನಟಿ ಹರ್ಷಿಕಾ, ನಟ ಭುವನ್ ಭಾಗಿಯಾಗಿದ್ದರು.