ದೆಹಲಿ, ಫೆ 06 (DaijiworldNews/AA): ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರ ಸೋದರಳಿಯ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರ ಬಣವೇ ನಿಜವಾದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ. ಎನ್ ಸಿಪಿ ಬಣಕ್ಕೆ ಮೀಸಲು ಚಿಹ್ನೆಯಾಗಿರುವ ಗಡಿಯಾರ ಚಿಹ್ನೆಯನ್ನು ಬಳಸಲು ಡಿಸಿಎಂ ಅಜಿತ್ ಪವಾರ್ ಅವರ ಬಣಕ್ಕೆ ಅರ್ಹತೆ ಇದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಈ ಮೂಲಕ ಎನ್ ಸಿಪಿ ಬಣದ ಚಿಹ್ನೆ ಅಜಿತ್ ಪವಾರ್ ಅವರ ಪಾಲಾಗಿದೆ.
ಈ ವಿವಾದವನ್ನು ಬಗೆಹರಿಸಲು ಚುನಾವಣಾ ಆಯೋಗ ‘ಶಾಸಕ ಬಹುಮತದ ಪರೀಕ್ಷೆ’ ನಡೆಸಿತ್ತು. ಡಿಸಿಎಂ ಅಜಿತ್ ಪವಾರ್ ಬಣವು ಬಹುಪಾಲು ಶಾಸಕರನ್ನು ಹೊಂದಿರುವುದರಿಂದ ಅವರ ಬಣಕ್ಕೆ ಬಹುಮತ ದೊರೆತಿದೆ. ಆದ್ದರಿಂದ ಎನ್ ಸಿಪಿ ಚಿಹ್ನೆ ಅಜಿತ್ ಪವಾರ್ ಬಣದ ಪಾಲಾಗಿದೆ. 6 ತಿಂಗಳಿಗಿಂತ ಹೆಚ್ಚು 10 ಕ್ಕೂ ಹೆಚ್ಚು ವಿಚಾರಣೆಗಳ ಬಳಿಕ ಚುನಾವಣಾ ಆಯೋಗ ಈ ನಿರ್ಧಾರಕ್ಕೆ ಬಂದಿದೆ.
ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿದ ಡಿಸಿಎಂ ಅಜಿತ್ ಪವಾರ್ ನಮ್ಮ ವಕೀಲರ ವಾದವನ್ನು ಆಲಿಸಿದ ಚುನಾವಣಾ ಆಯೋಗವು ನಮ್ಮ ಪರವಾಗಿ ತೀರ್ಪು ನೀಡಿದೆ. ಈ ತೀರ್ಪನ್ನು ನಾವು ವಿನಮ್ರವಾಗಿ ಸ್ವಾಗತಿಸುತ್ತೇವೆ ಎಂದು ತಿಳಿಸಿದ್ದಾರೆ.