ಉತ್ತರ ಪ್ರದೇಶ, ಫೆ 07 (DaijiworldNews/AA): ಪ್ರತಿವರ್ಷವೂ ಸಾಕಷ್ಟು ಮಂದಿ ಯುಪಿಎಸ್ ಸಿ ಪರೀಕ್ಷೆಯನ್ನು ಬರೆಯುತ್ತಾರೆ. ಆದರೆ ಅವರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಪರೀಕ್ಷೆಯಲ್ಲಿ ಉತ್ತೀರ್ಣರಾಗುವಲ್ಲಿ ಸಫಲರಾಗುತ್ತಾರೆ. ಆ ಮೂಲಕ ತಾವು ಐಎಎಸ್ ಅಧಿಕಾರಿ ಆಗುವ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಇದಕ್ಕೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾದ ಪ್ರತಿಭಾ ವರ್ಮಾ ಅವರು ಉತ್ತಮ ಉದಾಹರಣೆಯಾಗಿದ್ದಾರೆ.
ಪ್ರತಿಭಾ ವರ್ಮಾ ಅವರು ಐಎಎಸ್ ಅಧಿಕಾರಿಯಾಗುವ ಹಾದಿ ಸುಗಮವಾಗಿರಲಿಲ್ಲ. ಸಾಕಷ್ಟು ಅಡೆತಡೆಗಳನ್ನು ದಾಟಿ ಅವರು ಐಎಎಸ್ ಅಧಿಕಾರಿಯಾಗುತ್ತಾರೆ. ಮೂಲತಃ ಉತ್ತರ ಪ್ರದೇಶದ ಸುಲ್ತಾನ್ ಪುರದವರಾದ ಪ್ರತಿಭಾ ಹಿಂದಿ ಮಾಧ್ಯಮದ ಹಿನ್ನೆಲೆಯಿಂದ ಬಂದವರು. 2014 ರಲ್ಲಿ ಪ್ರತಿಭಾ ಅವರು ಐಐಟಿ ದೆಹಲಿಯಲ್ಲಿ ಬಿ.ಟೆಕ್ ಮುಗಿಸುತ್ತಾರೆ. ಬಳಿಕ ಟೆಲಿಕಾಂ ಕಂಪನಿಯಲ್ಲಿ ಕೆಲಸಕ್ಕೆ ಸೇರುತ್ತಾರೆ.
ಆದರೆ ಪ್ರತಿಭಾ ಅವರಿಗೆ ಐಎಎಸ್ ಅಧಿಕಾರಿಯಾಗಬೇಕೆನುವುದು ಕನಸಾಗಿತ್ತು. ಆದ್ದರಿಂದ ಟೆಲಿಕಾಂ ಕಂಪನಿಯಲ್ಲಿ ಎರಡು ವರ್ಷಗಳು ಕೆಲಸ ನಿರ್ವಹಿಸಿದ ನಂತರ ಕೆಲಸವನ್ನು ಬಿಡಲು ನಿರ್ಧರಿಸುತ್ತಾರೆ. 2016 ರಲ್ಲಿ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ಪ್ರಾರಂಭಿಸುತ್ತಾರೆ. ಪ್ರತಿಭಾ ಅವರು ತನ್ನ ಮೊದಲ ಪ್ರಯತ್ನದಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗುತ್ತಾರೆ. ಇದರಿಂದ ಕುಗ್ಗದೆ ಪ್ರತಿಭಾ ಎರಡನೇ ಬಾರಿ ಪರೀಕ್ಷೆ ಬರೆದು, 489ನೇ ಅಖಿಲ ಭಾರತ ರ್ಯಾಂಕ್ ಪಡೆಯುವ ಮೂಲಕ ಐಆರ್ ಎಸ್ ಆಗುತ್ತಾರೆ.
ಎರಡನೇ ಬಾರಿಗೆ ಯುಪಿಎಸ್ ಸಿ ಅಲ್ಲಿ ಉತ್ತೀರ್ಣರಾಗಿ ಐಆರ್ ಎಸ್ ಆದರೂ ಈ ಬಗ್ಗೆ ಅತೃಪ್ತಿ ಹೊಂದಿದ್ದ ಪ್ರತಿಭಾ, ಮೂರನೇ ಬಾರಿಗೆ ಯುಪಿಎಸ್ ಸಿ ಪರೀಕ್ಷೆ ಬರೆಯಲು ನಿರ್ಧರಿಸುತ್ತಾರೆ. ಇನ್ನು ಮೂರನೇ ಬಾರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಮುನ್ನ ಪ್ರತಿಭಾ ಅವರು ಡೆಂಗ್ಯೂ ಮತ್ತು ಟೈಫಾಯಿಡ್ ಗೆ ತುತ್ತಾಗಿದ್ದರು. ಇದರಿಂದ ಅವರು ಸಾಕಷ್ಟು ಸವಾಲುಗಳನ್ನು ಎದುರಿಸಿದ್ದರು.
2019 ರಲ್ಲಿ, ಪ್ರತಿಭಾ ಅವರು ಮೂರನೇ ಬಾರಿಗೆ ಯುಪಿಎಸ್ ಸಿ ಪರೀಕ್ಷೆ ಬರೆದು ಉತ್ತೀರ್ಣರಾದ ಅವರು 3 ನೇ ಅಖಿಲ ಭಾರತ ರ್ಯಾಂಕ್ ಪಡೆಯುವ ಮೂಲಕ ಐಎಎಸ್ ಅಧಿಕಾರಿಯಾಗುತ್ತಾರೆ. ಪ್ರತಿಭಾ ಅವರು ಸಾಕಷ್ಟು ಅಡೆತಡೆಗಳನ್ನು ದಾಟಿ ಕೊನೆಗೂ ಐಎಎಸ್ ಅಧಿಕಾರಿ ಆಗುವಲ್ಲಿ ಯಶಸ್ಸು ಕಾಣುತ್ತಾರೆ. ಈ ಮೂಲಕ ಎಲ್ಲಾ ಯುಪಿಎಸ್ ಸಿ ಅಭ್ಯರ್ಥಿಗಳಿಗೆ ಸ್ಫೂರ್ತಿಯಾಗಿದ್ದಾರೆ.