ಮುಂಬೈ, ಫೆ 07 (DaijiworldNews/AA): "ನಾನು ಮಾಜಿ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರ ನಡವಳಿಕೆ, ಸರಳತೆ ಮತ್ತು ವ್ಯಕ್ತಿತ್ವದ ಬಗ್ಗೆ ಅವರಿಂದ ಸಾಕಷ್ಟು ಕಲಿತಿದ್ದೇನೆ. ಅಟಲ್ ಬಿಹಾರಿ ವಾಜಪೇಯಿ ಅವರ ಬಳಿಕ ನನ್ನ ಮೇಲೆ ಹೆಚ್ಚು ಪ್ರಭಾವ ಬೀರಿದ ವ್ಯಕ್ತಿ ಜಾರ್ಜ್ ಫೆರ್ನಾಂಡಿಸ್" ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಲೋಕಮಾತ್ ಮೀಡಿಯಾ ಗ್ರೂಪ್ ಆಯೋಜಿಸಿದ್ದ, ಸಂಸದರ ಅಭಿವೃದ್ಧಿ ಕುರಿತ ಕೊಡುಗೆಗಳಿಗಾಗಿ ನೀಡುವ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಚಾರ ಹಾಗೂ ಜನಪ್ರಿಯತೆ ಬೇಕು. ಆದರೆ ಆಯಾಯ ಕ್ಷೇತ್ರಗಳಲ್ಲಿನ ಮತದಾರರ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದು ಅವರು ಸಂಸತ್ತಿನಲ್ಲಿ ಮಾತನಾಡುವುದು ಹೆಚ್ಚು ಮುಖ್ಯವಾಗುತ್ತದೆ ಎಂದರು.
ನಾನು ಯಾವಾಗಲೂ ಹೇಳುತ್ತಿರುತ್ತೇನೆ, ಅಧಿಕಾರದಲ್ಲಿ ಯಾವುದೇ ಸರ್ಕಾರವಿದ್ದರೂ, ಒಂದು ವಿಷಯ ಮಾತ್ರ ಸತ್ಯ, ಯಾರು ಒಳ್ಳೆಯ ಕೆಲಸ ಮಾಡುತ್ತಾರೋ ಅವರಿಗೆ ಗೌರವ ಸಿಗುವುದಿಲ್ಲ. ಅದೇ ರೀತಿ ಯಾರು ತಪ್ಪು ಮಾಡುತ್ತಾರೋ ಅಂತಹವರಿಗೆ ಯಾವಾಗಲೂ ಶಿಕ್ಷೆಯೂ ಆಗುವುದಿಲ್ಲ. ನಮ್ಮ ಚರ್ಚೆ ಹಾಗೂ ಸಂವಾದದಲ್ಲಿ, ಭಿನ್ನಾಭಿಪ್ರಾಯಗಳು ಬರುವುದು ಸಮಸ್ಯೆ ಅಲ್ಲ. ನಮ್ಮ ಸಮಸ್ಯೆ ವಿಚಾರಗಳ ಕೊರತೆ. ತಮ್ಮ ಸಿದ್ಧಾಂತದ ಆಧಾರದ ಮೇಲೆ ದೃಢವಾಗಿ ನಿಲ್ಲುವ ಮುಖಂಡರಿದ್ದಾರೆ. ಆದರೆ ಅಂತಹವರ ಸಂಖ್ಯೆ ಕಡಿಮೆಯಾಗುತ್ತಿದೆ. ಸದ್ಯದ ಸಿದ್ಧಾಂತದ ಅವನತಿ ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅವರು ಹೇಳಿದರು.
ಭಾರತ ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ. ಪ್ರಧಾನಿ ಮೋದಿ ಅವರ ಮಾತುಗಳಲ್ಲಿ ಹೇಳುವುದಾದರೆ, ನಮ್ಮ ದೇಶ ಪ್ರಜಾಪ್ರಭುತ್ವದ ತಾಯಿಯಾಗಿದೆ. ಇದು ನಮ್ಮ ವಿಶೇಷತೆಯಾಗಿದೆ. ನಮ್ಮ ದೇಶದ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆ ಜಗತ್ತಿನಲ್ಲಿರುವ ಬೇರೆ ದೇಶಕ್ಕಿಂತ ಭಿನ್ನವಾಗಿದೆ ಎಂದು ಅವರು ತಿಳಿಸಿದರು.