ಬೆಂಗಳೂರು, ಏ 25(Daijiworld News/MSP): ಮಹಿಳೆಯರ ಘನತೆಗೆ ಕುಂದು ಬರುವ ರೀತಿಯಲ್ಲಿ ಹೇಳಿಕೆ ಕೊಟ್ಟಿರುವ ಬಿಜೆಪಿ ಶಾಸಕ ಸಿಟಿ ರವಿ ಅವರ ವಿರುದ್ದ ಕ್ರಮ ಜರುಗಿಸುವಂತೆ ಕೆಪಿಸಿಸಿ ಮಹಿಳಾ ಘಟಕ ಏ.೨೫ರಂದು ಮಹಿಳಾ ಆಯೋಗಕ್ಕೆ ದೂರು ನೀಡಿದೆ.
ಏ.14 ರಂದು ಲೋಕಸಭೆಯ ಚುನಾವಣೆಯ ಪ್ರಚಾರದ ಸಂದರ್ಭ ಬಿಜೆಪಿ ಪಕ್ಷದ ಚಿಕ್ಕಮಗಳೂರು ಶಾಸಕ ಸಿ.ಟಿ ರವಿ ಅವರು ಹಾಸನದಲ್ಲಿ, ಮೋದಿ ವಿರೋಧಿಯವರು ತಾಯಿ..., ಯಾರಾದರೂ ಜಾತಿ ಧರ್ಮದ ಕಾರಣಕ್ಕೆ ಮೋದಿ ಅವರನ್ನು ವಿರೋಧಿಸಿದ್ರೆ ಉಂಡ ಮನೆಗೆ ದ್ರೋಹ ಬಗೆದಂತೆ ಎಂದು ಹೇಳಿಕೆ ನೀಡಿದ್ದರು. ಶಾಸಕ ರವಿ ಮಹಿಳೆಯರ ಘನತೆಯನ್ನು ಅಪಮಾನಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಸಚಿವೆ ಜಯಮಾಲ ಖಂಡಿಸಿ ಸಿ,ಟಿ ರವಿ ನಾಲಿಗೆ ಚಪ್ಪಲಿಯಿದ್ದಂತೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.
ಇದೀಗ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕವೂ ಮಹಿಳಾ ಆಯೋಗಕ್ಕೆ ದೂರು ನೀಡಿದ್ದು, ಪ್ರಚಾರದ ಸಂದರ್ಭ ಎದುರಾಳಿಯನ್ನು , ಪಕ್ಷವನ್ನು ಟೀಕೆ ಮಾಡುವುದು ಸಹಜ ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರುವ , ಶಾಸನ ರಚನಾ ಸ್ಥಾನದಲ್ಲಿ ಭಾಗಿಯಾಗಿರುವ ವ್ಯಕ್ತಿ ಮಹಿಳೆಯ ಘನತೆಯನ್ನು ಸಾರ್ವಜನಿಕವಾಗಿ ಹರಣ ಮಾಡುವುದು ಸಾಮಾಜಿಕ ನೆಲೆಗಟ್ಟಿನಲ್ಲಿ ಕೆಟ್ಟ ನಡವಳಿಕೆಯಾಗಿದ್ದು ಈ ಹಿನ್ನಲೆಯಲ್ಲಿ ಶಾಸಕ ಸಿ,ಟಿ ರವಿ ವಿರುದ್ದ ಸೂಕ್ತ ಕಾನೂಕು ಕ್ರಮ ಕೈಗೊಳ್ಳಬೇಕು ಎಂದು ಶಾಸಕಿ ಸೌಮ್ಯ ರೆಡ್ಡಿ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪ ಅಮರನಾಥ್ ಹಾಗೂ ಸದಸ್ಯರು ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.