ರಾಯಚೂರು, ಫೆ 07 (DaijiworldNews/PC): ಕೃಷ್ಣಾ ನದಿಯಲ್ಲಿ ದೊರೆತ ಪುರಾತನ ವಿಷ್ಣು ಹಾಗೂ ಶಿವಲಿಂಗ ವಿಗ್ರಹಗಳು ಪುರಾತತ್ವ ಇಲಾಖೆಯಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಆದ್ದರಿಂದ ಕರ್ನಾಟಕ ಹಾಗೂ ತೆಲಂಗಾಣದ ಅರ್ಚಕರು, ಭಕ್ತರು ವಿಗ್ರಹಗಳು ನಮಗೆ ಸೇರಿದ್ದು ಅಂತ ಪೈಪೋಟಿ ನಡೆಸಿದ ಘಟನೆ ನಡೆದಿದೆ.
ದೇವಸುಗೂರು ಬಳಿ ಕೃಷ್ಣಾ ನದಿಯಲ್ಲಿ ಶಿವಲಿಂಗ ಹಾಗೂ ವಿಷ್ಣುವಿನ ವಿಗ್ರಹಗಳು ದೊರೆತಿದ್ದು, ಈ ಮೂರ್ತಿಗಳು 11ನೇ ಶತಮಾನಕ್ಕೆ ಸೇರಿದ ಮೂರ್ತಿಗಳು ಎನ್ನಲಾಗುತ್ತಿದೆ. ಅದರಲ್ಲಿ ಅಯೋಧ್ಯೆಯಲ್ಲಿ ಬಾಲರಾಮನ ವಿನ್ಯಾಸ ಹೋಲುವ ದಶವತಾರಿ ವಿಷ್ಣುರೂಪದ ವೆಂಕಟೇಶ್ವರ ಸ್ವಾಮಿ ವಿಗ್ರಹವನ್ನ ಮಾತ್ರ ದೇವಸುಗೂರಿನ ರಾಮಲಿಂಗೇಶ್ವರ ದೇವಾಲಯದಲ್ಲಿ ಇಡಲಾಗಿದೆ. ಆದ್ದರಿಂದ ಕರ್ನಾಟಕ ಹಾಗೂ ತೆಲಂಗಾಣದ ಅರ್ಚಕರು, ಭಕ್ತರು ವಿಗ್ರಹಗಳು ನಮಗೆ ಸೇರಿದ್ದು ಅಂತ ಪೈಪೋಟಿ ನಡೆಸಿದ್ದಾರೆ.
ಅದೇ ಸಮಯದಲ್ಲಿ ದೊರಕಿದ ಉಳಿದ ಎರಡು ವಿಗ್ರಹಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಕೃಷ್ಣಾನದಿಯಲ್ಲೇ ಬಿಡಲಾಗಿದೆ. ನದಿಯಲ್ಲಿ ಸೇತುವೆ ನಿರ್ಮಾಣ ಕಾರ್ಯ ನಡೆದಿದ್ದು, ಜನ ಕಾಲುದಾರಿಯಲ್ಲಿ ಬಂದು ವಿಗ್ರಹಗಳ ದರ್ಶನ ಪಡೆಯುತ್ತಿದ್ದಾರೆ. ದಶವತಾರಿ ವಿಷ್ಣು ವಿಗ್ರಹಕ್ಕೆ ಮಾತ್ರ ಪೈಪೋಟಿಯಿದ್ದು ಶಿವಲಿಂಗ ಹಾಗೂ ಇನ್ನೊಂದು ವಿಷ್ಣು ವಿಗ್ರಹ ಪತ್ತೆಯಾದ ಜಾಗದಲ್ಲೇ ಉಳಿದಿವೆ.
ಇಲ್ಲಿಯವರೆಗೂ ಪುರಾತತ್ವ ಇಲಾಖೆ ಈ ವಿಗ್ರಹಗಳ ಸಂರಕ್ಷಣೆಗೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಹೀಗಾಗಿ ನದಿಯಲ್ಲಿ ದೊರೆತ ಐತಿಹಾಸಿಕ ಮೂರ್ತಿಗಳನ್ನು ಸಂರಕ್ಷಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.