ಬೆಂಗಳೂರು, ಫೆ 07(DaijiworldNews/MS): ನರೇಂದ್ರ ಮೋದಿಯವರು ಮೂರನೆ ಬಾರಿ ಪ್ರಧಾನಿಯಾದ ಒಂದು ತಿಂಗಳಲ್ಲಿ ಕಾಂಗ್ರೆಸ್ ದೇಶಾದ್ಯಂತ ಇಬ್ಬಾಗವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭವಿಷ್ಯ ನುಡಿದಿದ್ದಾರೆ.
ರಾಜ್ಯ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕರ್ನಾಟಕದ ಇತಿಹಾಸದಲ್ಲಿ ಇಷ್ಟು ದೊಡ್ಡ ನಾಟಕ ಮಾಡುವ ಸರ್ಕಾರ ಇನ್ನೊಂದಿಲ್ಲ. ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆದ ಮೇಲೆ ತಮ್ಮ ತತ್ವ ಸಿದ್ದಾಂತ ಗಾಳಿಗೆ ತೂರಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ ಎಂದು ಹೇಳಿದರು.
ಅನ್ಯಾಯಕ್ಕೆ ಸಿದ್ದರಾಮಯ್ಯ ಕಾರಣ:
ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ಆರಂಭವಾಗಿಲ್ಲ. ಬರಗಾಲ ಬಿದ್ದಿದೆ ಬರ ಪರಿಹಾರ ನೀಡಿಲ್ಲ. ಯಾವ ನೈತಿಕತೆ ಇಟ್ಟುಕೊಂಡು ದೆಹಲಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ನಾಚಿಕೆಯಾಗಬೇಕು ಇವರಿಗೆ. ಯುಪಿಎ ಸರ್ಕಾರದ ಅವಧಿಯಲ್ಲಿ ರಾಜ್ಯಕ್ಕೆ ಎಷ್ಟು ಅನುದಾನ ಬಂದಿದೆ. ಎನ್ ಡಿಎ ಅವಧಿಯಲ್ಲಿ ಎಷ್ಟು ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಲಿ, ಯುಪಿಎ ಅವಧಿಯಲ್ಲಿ 82 ಸಾವಿರ ಕೋಟಿ ಮಾತ್ರ ಬಂದಿದೆ. ಮೋದಿ ಕಲಾವದಲ್ಲಿ 2.82 ಲಕ್ಷ ಕೋಟಿ ಬಂದಿದೆ. ಎನ್ ಡಿಎ ಅವಧಿಯಲ್ಲಿ ಎರಡು ಲಕ್ಷ ಕೋಟಿ ರೂ ಹೆಚ್ಚಿಗೆ ಬಂದಿದೆ. ರಾಜ್ಯಕ್ಕೆ ಅನ್ಯಾಯ ಮಾಡಿದವರು ಮನಮೋಹನ್ ಸಿಂಗ್ ಮತ್ತು ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದರು.
ಮೊದಲು ರಾಜ್ಯಗಳಿಗೆ ಅನುದಾನ ಶೇ 32% ಬರುತ್ತಿತ್ತು. ಮೋದಿಯವರು ಅದನ್ನು ಶೇ 42% ಹೆಚ್ಚಳ ಮಾಡಿದ್ದಾರೆ. ಹಣಕಾಸು ಆಯೋಗ ಕೇಂದ್ರ ಸರ್ಕಾರಕ್ಕೂ ಸಂಬಂಧ ಇಲ್ಲ. ಅದು ಎಲ್ಲ ರಾಜ್ಯಗಳಿಗೂ ಭೇಟಿ ನೀಡಿ, ಬಡತನ, ಜಸಂಖ್ಯೆ ತಲಾ ಆದಾಯ ಎಲ್ಲವನ್ನು ಪರಿಗಣನೆ ಮಾಡುತ್ತದೆ. 15 ನೇ ಹಣಕಾಸು ಆಯೋಗ ರಾಜ್ಯಕ್ಕೆ ಭೇಟಿ ನೀಡಿದಾಗ ಸಿದ್ದರಾಮಯ್ಯ ಅವರ ಸರ್ಕಾರ ಇತ್ತು. ಆಗ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ತಿಳಿಸಲು ವಿಫಲವಾಗಿದೆ. ರಾಜ್ಯದ ಪಾಲು ಶೇ 4.7 % ದಿಂದ ಶೇ 3.6% ಕ್ಕೆ ಕಡಿಮೆಯಾಗಲು ಸಿದ್ದರಾಮಯ್ಯ ಅವರೆ ನೇರ ಕಾರಣ ಎಂದು ವಾಗ್ದಾಳಿ ನಡೆಸಿದರು
ಖಜಾನೆ ತುಂಬಿದ್ದರೆ ಬರ ಪರಿಹಾರಕೊಡಿ:
ಶಾಸಕರ ಅನುದಾನ ಕೂಡ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಶಾಸಕರಿಗೂ 25 ಕೋಟಿ ರೂ. ಹಣ ನೀಡುತ್ತೇವೆ ಎಂದು ಅವರಿಗೂ ಅನ್ಯಾಯ ಮಾಡುತ್ತಿದ್ದಾರೆ. ಖಜಾನೆ ತುಂಬಿದ್ದರೆ ರೈತರಿಗೆ ಬರ ಪರಿಹಾರ ಕೊಡಿ, ಕಲ್ಯಾಣ ಕರ್ನಾಟಕಕ್ಕೆ 3000 ಕೋಟಿ ಬಿಡುಗಡೆ ಮಾಡಲು ರಾಜ್ಯಪಾಲರು ಅನುಮೋದನೆ ನೀಡಿದ್ದಾರೆ. ಆದರೆ, ಅದನ್ನು ಬಿಡುಗಡೆ ಮಾಡಿಲ್ಲ.ಮೋದಿಯವರು ರಾಜ್ಯಕ್ಕೆ ಸ್ಮಾರ್ಟ್ ಸಿಟಿ, ಹೈವೆ, ರೈಲ್ವೆ, ಕೈಗಾರಿಕೆಗಳನ್ನು ನೀಡಿದ್ದಾರೆ. ಮೋದಿಯವರು ಪ್ರಧಾನಿ ಯಾಗಿದ್ದಾಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರುವುದು ಇವರ ಪುಣ್ಯ. ಮನಮೋಹನ್ ಸಿಂಗ್ ಸರ್ಕಾರ ಇದ್ದಿದ್ದರೆ ನಿಮಗೆ ಚಿಪ್ ಕೊಡುತ್ತಿದ್ದರು ಎಂದರು.
ರಾಜೀನಾಮೆ ನೀಡಲಿ:
ರಾಜ್ಯ ಖಜಾನೆ ಖಾಲಿ ಮಾಡಿ ಜನರಿಗೆ ಸುಳ್ಳು ಹೇಳಿ ದೆಹಲಿಗೆ ಶೋಕಿಮಾಡಲು ಕಾಂಗ್ರೆಸ್ ನಾಯಕರು ಹೋಗಿದ್ದಾರೆ. ರಾಜ್ಯಕ್ಕೆ ಅನ್ಯಾಯ ಮಾಡಿರುವ ಕಾಂಗ್ರೆಸ್ ಸರ್ಕಾರ. ರಾಜಿನಾಮೆ ನೀಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಧಿಕಾರದಲ್ಲಿ ಇರಲು ನೈತಿಕತೆ ಇಲ್ಲ. ಮಹಾತ್ಮಾ ಗಾಂಧಿ ಫೊಟೊ ಹಾಕಿಕೊಂಡು ಜಾಹಿರಾತು ನೀಡಿ ಗಾಂಧಿಗೂ ಅವಮಾನ ಮಾಡಿದ್ದಾರೆ ಎಂದು ಹೇಳಿದರು.
ಸಿಎಂ, ಮಂತ್ರಿಗಳನ್ನು ಹುಡುಕಿಕೊಡಿ:
ವಿಧಾನಸೌಧ ಸಂಪೂರ್ಣ ಖಾಲಿಯಾಗಿದ್ದು, ಸರ್ಕಾರ ಖಾಣೆಯಾಗಿದೆ. ಸಿಎಂ, ಮಂತ್ರಿಗಳನ್ನು ಹುಡುಕಿಕೊಡಿ ಎಂದು ವಾರೆಂಟ್ ಹೊರಡಿಸಬೇಕು ಎಂದು ಇದೇ ಬೊಮ್ಮಾಯಿ ಹೇಳಿದರು.