ಶ್ರೀನಗರ, ಫೆ 07 (DaijiworldNews/PC): ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಹಬ್ಬಾ ಕದಲ್ ಪ್ರದೇಶದಲ್ಲಿ ಜಿಲ್ಲೆಯ ಸ್ಥಳೀಯರಲ್ಲದ ವ್ಯಕ್ತಿಯೊಬ್ಬರನ್ನು ಭಯೋತ್ಪಾದಕರು ಗುಂಡಿಕ್ಕಿ ಕೊಂದಿದ್ದಾರೆ.
ಅಮೃತಸರ ಮೂಲದ ಒಣ ಹಣ್ಣು ಮಾರಾಟಗಾರ ಅಮೃತ್ ಪಾಲ್ (31) ಭಯೋತ್ಪಾದಕರ ಗುಂಡಿಗೆ ಬಲಿಯಾಗಿದ್ದಾರೆ.
ಶ್ರೀನಗರದ ಹಬ್ಬಾ ಕಡಲ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇಬ್ಬರು ವ್ಯಕ್ತಿಗಳ ಮೇಲೆ ಉಗ್ರರು ಹತ್ತಿರದಿಂದಲೇ ಗುಂಡಿನ ದಾಳಿ ನಡೆಸಿದ್ದಾರೆ, ಸದ್ಯ ಈ ಪ್ರದೇಶವನ್ನು ಸುತ್ತುವರಿಯಲಾಗಿದೆ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಬ್ಬರು ಮೃತಪಟ್ಟಿದ್ದು ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ವೈದ್ಯಕೀಯ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿದೆ. ಪ್ರದೇಶವನ್ನು ಭದ್ರತಾ ಪಡೆ ಸುತ್ತುವರಿದಿದ್ದು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದೇವೆ ಎಂದು ಕಾಶ್ಮೀರ ವಲಯ ಪೊಲೀಸರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.