ಬೆಂಗಳೂರು,ಫೆ 08 (DaijiworldNews/MS): ತೆರಿಗೆ ಹಂಚಿಕೆಯೂ ಸೇರಿದಂತೆ ಕನ್ನಡಿಗರಿಗೆ ಕೇಂದ್ರ ಸರ್ಕಾರದಿಂದ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಿ ನಮ್ಮ ಸರ್ಕಾರ ನಡೆಸಿದ್ದ ‘’ದೆಹಲಿ ಚಲೋ’’ ಹೋರಾಟ ದೇಶದ ಏಕತೆ ಮತ್ತು ಭದ್ರತೆಗೆ ಬೆದರಿಕೆ ಒಡ್ಡಿದೆ ಎಂಬ ಪ್ರಧಾನಿ ಮೋದಿಯವರ ಹೇಳಿಕೆ ಅಚ್ಚರಿ ಉಂಟು ಮಾಡಿದೆ. ಇದೇ ಮೋದಿಯವರು ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರದ ವಿರುದ್ಧ ಪುಂಖಾನುಪುಂಖವಾಗಿ ನೀಡಿರುವ ಹೇಳಿಕೆಗಳಿಂದ ದೇಶದ ಏಕತೆ ಮತ್ತು ಭದ್ರತೆಗೆ ಬೆದರಿಕೆ ಒಡ್ಡಿರಲಿಲ್ಲವೇ? ಎಂದು ಬಿಜೆಪಿ ವಿರುದ್ದ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್ ಮಾಡಿದ್ದು, " ಕೇಂದ್ರ ಹಣಕಾಸು ಆಯೋಗದ ವಿರುದ್ದ ಮೊದಲು ಮಾತನಾಡಿದ್ದೇ ನರೇಂದ್ರ ಮೋದಿ ಅವರು. ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ 2012ರ ಡಿಸೆಂಬರ್ ಆರರಂದು ಹೇಳಿಕೆಯೊಂದನ್ನು ನೀಡಿ 'ಗುಜರಾತ್ ರಾಜ್ಯ ಕೇಂದ್ರ ಸರ್ಕಾರಕ್ಕೆ ರೂ.60,000 ಕೋಟಿ ನೀಡುತ್ತಿದೆ, ಇದರಲ್ಲಿ ನಮಗೆ ವಾಪಸ್ ಬಂದದ್ದು ಎಷ್ಟು? ಗುಜರಾತ್ ಭಿಕ್ಷುಕ ರಾಜ್ಯವೇ? ಎಂದು ಪ್ರಶ್ನಿಸಿದ್ದರು.
ಕೇಂದ್ರ ಸರ್ಕಾರ ತನ್ನನ್ನು ರಕ್ಷಿಸಿಕೊಳ್ಳಲು ಮತ್ತು ವಿರೋಧಿಗಳನ್ನು ಹಣಿಯಲು ಸಿಬಿಐ ಸಂಸ್ಥೆಯನ್ನು ದುರುಪಯೋಗ ಮಾಡುತ್ತಿದೆ ಎಂದು ಗುಜರಾತ್ ಮುಖ್ಯಮಂತ್ರಿಯಾಗಿ ಆರೋಪಿಸುತ್ತಿದ್ದ ನರೇಂದ್ರ ಮೋದಿ ಅವರು ಈಗ ಸಿಬಿಐ, ಇಡಿ ಮತ್ತು ಆದಾಯ ತೆರಿಗೆ ಇಲಾಖೆಯ ಪ್ರಾಮಾಣಿಕತೆಯನ್ನು ಪ್ರಶ್ನಿಸಿದವರನ್ನು ದೇಶದ್ರೊಹಿಗಳೆಂದು ದೂರುತ್ತಿದ್ದಾರೆ.
ಯುಪಿಎ ಸರ್ಕಾರ ವಿದೇಶಿ ನೇರ ಬಂಡವಾಳ ಹೂಡಿಕೆಯ ಕಾನೂನನ್ನು ಜಾರಿಗೆ ತಂದಾಗ ಅದನ್ನು ವಿರೋಧಿಸಿದ್ದ ನರೇಂದ್ರ ಮೋದಿಯವರು ‘ಇನ್ನು ಮುಂದೆ ನಿತ್ಯ ಬಳಕೆಯ ಉಪ್ಪು, ಸಾಂಬಾರ ಪದಾರ್ಥಗಳನ್ನೂ ವಿದೇಶಿಯರೇ ಮಾರುತ್ತಾರೆ' ಎಂದು ವ್ಯಂಗ್ಯವಾಡಿದ್ದರು. ಎಫ್ ಡಿ ಐ ನಿಂದಾಗಿ ದೇಶದ ಸಣ್ಣ ಸಣ್ಣ ಅಂಗಡಿ ಮಾಲೀಕರು ಮತ್ತು ಉತ್ಪಾದನಾ ಕ್ಷೇತ್ರದಲ್ಲಿರುವವರು ನಿರುದ್ಯೋಗಿಗಳಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದರು
ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಆಧಾರ್ ಗುರುತಿನ ಚೀಟಿಯ ಪ್ರಬಲ ವಿರೋಧಿಯಾಗಿದ್ದ ನರೇಂದ್ರ ಮೋದಿಯವರು ‘ಆಧಾರ್ ಕಾರ್ಡ್ ಗೆ ಭವಿಷ್ಯದ ಮುನ್ನೋಟವೇ ಇಲ್ಲ, ಇದು ಕೇವಲ ರಾಜಕೀಯ ಗಿಮಿಕ್ ಎಂದು ಟೀಕಿಸಿದ್ದರು. ಅದೇ ಮೋದಿಯವರು ಪ್ರಧಾನಿಯಾದ ನಂತರ ತಮ್ಮ ನಿಲುವು ಬದಲಿಸಿ ಆಧಾರ್ ಗುರುತಿನ ಚೀಟಿಯ ಪ್ರಬಲ ಪ್ರತಿಪಾದಕರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ