ನವದೆಹಲಿ, ಫೆ 8(DaijiworldNews/SK): ಕೆಲವು ದಿನಗಳ ಹಿಂದೆಯಷ್ಟೇ ಕೇಂದ್ರದ ಮಧ್ಯಂತರ ಬಜೆಟ್ ಮಂಡಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದ ಆರ್ಥಿಕ ಸ್ಥಿತಿಗತಿ ಕುರಿತು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ 'ಶ್ವೇತಪತ್ರ' ಮಂಡಿಸಲಿದೆ ಎಂದು ಘೋಷಣೆ ಮಾಡಿದ್ದರು.
ಇದೀಗ ಈ ಹೇಳಿಕೆಯ ಪ್ರಕಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಇಂದು ಲೋಕಸಭೆಯಲ್ಲಿ ಭಾರತೀಯ ಆರ್ಥಿಕತೆಯ ಶ್ವೇತಪತ್ರದ ಪ್ರತಿಯನ್ನು ಮಂಡಿಸಿದ್ದಾರೆ.
'ಭಾರತೀಯ ಆರ್ಥಿಕತೆಯ ಶ್ವೇತಪತ್ರ ಹೊರಡಿಸುವ ಮೂಲಕ ಆರ್ಥಿಕ ಸ್ಥಿತಿಯ ಬಗ್ಗೆ ಜನತೆಗೆ ಮನವರಿಕೆ ಮಾಡೋ ಪ್ರಯತ್ನಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂಲಕ 2014 ರಲ್ಲಿ ಅಧಿಕಾರ ವಹಿಸಿಕೊಂಡಾಗ ಈ ಸರ್ಕಾರಕ್ಕೆ ನೀಡಲಾದ ಆಡಳಿತದ ಸ್ವರೂಪ ಮತ್ತು ವ್ಯಾಪ್ತಿ, ಆರ್ಥಿಕ ಮತ್ತು ಹಣಕಾಸಿನ ಬಿಕ್ಕಟ್ಟುಗಳ ಬಗ್ಗೆ ಸಂಸತ್ತಿನ ಸದಸ್ಯರಿಗೆ ಮತ್ತು ಭಾರತದ ಜನರಿಗೆ ತಿಳಿಸಲು ಇದು ನೇರವಾಗಲಿದೆ.
10 ವರ್ಷಗಳಲ್ಲಿ ಅಭಿವೃದ್ಧಿ ಹೊಂದಿದ ಭಾರತ ದೇಶದ ಚಿತ್ರಣದ ಜೊತೆಗೆ 2014ರವರೆಗೂ ನಾವೆಲ್ಲಿದ್ದೆವು ಮತ್ತು ಈಗ ಎಲ್ಲಿದ್ದೇವೆ ಎಂಬುದನ್ನು ಹಿಂತಿರುಗಿ ನೋಡಲು ಈ ಶ್ವೇತ ಪತ್ರ ಸಹಕರಿಸುತ್ತದೆ ಎಂದು ವರದಿಯಾಗಿದೆ.