ಬೆಂಗಳೂರು, ಫೆ 08 (DaijiworldNews/HR): ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧ ಮಾಡಿರುವ ಶೇ 40 ಕಮಿಷನ್ ಆರೋಪದ ಕುರಿತಂತೆ ಜಸ್ಟಿಸ್ ನಾಗಮೋಹನದಾಸ್ ಸಮಿತಿಯು ಸ್ವಯಂಪ್ರೇರಿತ ತನಿಖೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಅಶ್ವತ್ಥನಾರಾಯಣ ಅವರು ಮನವಿ ಮಾಡಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಿಜೆಪಿ ಸರಕಾರದ ಅವ್ಯವಹಾರ ಕುರಿತು ನ್ಯಾಯಮೂರ್ತಿ ನಾಗಮೋಹನ್ದಾಸ್ ಸಮಿತಿ ಮೂಲಕ ತನಿಖೆ ಮಾಡಿಸುವುದಾಗಿ ಕಾಂಗ್ರೆಸ್ ಸರಕಾರ ಹೇಳಿದೆ. ನ್ಯಾಯಮೂರ್ತಿ ನಾಗಮೋಹನ್ದಾಸ್ ಅವರು ಕೆಂಪಣ್ಣ ಮಾಡಿದ ಆರೋಪಗಳ ಬಗ್ಗೆ ಸ್ವಯಂಪ್ರೇರಿತ ತನಿಖೆ ಮಾಡಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರಕಾರದ ಬಗ್ಗೆ ಕೇವಲ 3 ತಿಂಗಳಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದೆ. ಆಡಳಿತ ಪಕ್ಷದ ಸಚಿವರು, ಶಾಸಕರು ಮುಖ್ಯಮಂತ್ರಿಗಳ ವಿರುದ್ಧ ಮತ್ತು ಸರಕಾರದ ವಿರುದ್ಧ ಹೈಕಮಾಂಡಿಗೆ ಪತ್ರ ಬರೆದು ದೂರು ನೀಡಿದ್ದಾರೆ. ಈ ಮೂಲಕ ಸರಕಾರದಲ್ಲಿ ಭಿನ್ನಮತ ಕಂಡುಬಂದಿದೆ ಎಂದು ವಿವರಿಸಿದರು.
ಆಡಳಿತ ಪಕ್ಷದ ಶಾಸಕರಿಗೆ ಅಭಿವೃದ್ಧಿ ಕಾಮಗಾರಿಗಳಿಗೆ ನೀಡಲು ಈ ಸರಕಾರದಲ್ಲಿ ಹಣ ಇಲ್ಲ. ರಾಜಸ್ವ ತೆರಿಗೆ ಸಂಗ್ರಹದಲ್ಲೂ ಸರಕಾರ ಹಿಂದೆ ಬಿದ್ದಿದೆ. ಈ ರೀತಿ ದಿವಾಳಿ ಎದ್ದ ಸರಕಾರದಲ್ಲಿ ‘ಬೆಂಕಿ ಬಿದ್ದ ಮನೆಯಲ್ಲಿ ಗಳ ಹಿಡಿಯಲು ಅಧಿಕಾರಿಗಳು ಮುಂದಾಗಿದ್ದಾರೆ’ ಎಂದು ಆರೋಪಿಸಿದರು.
ಈ ಹಿಂದೆ ಬಿಜೆಪಿ ಸರಕಾರದ ವಿರುದ್ಧ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಇವತ್ತು ನೇರವಾಗಿ ಈ ಸರಕಾರದಲ್ಲಿ ಅಧಿಕಾರಿಗಳು ಶೇ 40ಕ್ಕಿಂತ ಹೆಚ್ಚು ಹಣವನ್ನು ಗುತ್ತಿಗೆದಾರರಿಂದ ಕೇಳುತ್ತಿರುವುದಾಗಿ ಹೇಳಿದ್ದು, ಸರಕಾರದ ವಿರುದ್ಧ ನೇರ ಆರೋಪವನ್ನು ಕೆಂಪಣ್ಣ ಮಾಡುತ್ತಿದ್ದಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಕೆಂಪಣ್ಣರನ್ನು ಉಪಯೋಗಿಸಿಕೊಂಡು ನಮ್ಮ ಸರಕಾರದ ವಿರುದ್ಧ ಪ್ರಧಾನಿಗಳಿಗೆ ಪತ್ರ ಬರೆಸಿದ್ದರು ಎಂದು ಆಕ್ಷೇಪಿಸಿದರು.