ಹರಿಯಾಣ, ಫೆ 9(DaijiworldNews/SK): ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸುಲಭದ ಮಾತಲ್ಲ. ಅದೆಷ್ಟೊ ಜನರು ಹಗಲಿರುಳು ಎನ್ನದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುತ್ತಾರೆ. ಆದರೆ ಇಲೊಬ್ಬರು ತರಬೇತಿ ಕೇಂದ್ರಗಳಿಗೆ ಹಣ ವ್ಯಯಿಸದೇ ಸ್ವಯಂ-ಅಧ್ಯಯನವನ್ನು ನಡೆಸಿ ಮೊದಲ ಪ್ರಯತ್ನದಲ್ಲಿಯೇ UPSC ಪರೀಕ್ಷೆಯಲ್ಲಿ ತೇರ್ಗಡೆಯಾದ ದಿವ್ಯಾ ಮಿತ್ತಲ್ ಅವರ ಯಶೋಗಾಥೆ.
ದೆಹಲಿಯಲ್ಲಿ ಜನಿಸಿದ ದಿವ್ಯಾ ಮಿತ್ತಲ್ ಅವರು ಮೂಲತಃ ಹರಿಯಾಣದ ರೇವಾರಿಯವರು. ತನ್ನ ಶೈಕ್ಷಣಿಕ ಜೀವನವನ್ನು ದೆಹಲಿಯಲ್ಲಿ ಆರಂಭಿಸಿದ ಅವರು ಐಐಟಿಯಲ್ಲಿ ಬಿಟೆಕ್ ಮಾಡಿ, ಬಳಿಕ ಬೆಂಗಳೂರಿನ ಐಐಎಂನಲ್ಲಿ ಎಂಬಿಎ ಪದವಿ ಪಡೆದರು.
ಬ್ಯಾಲದಿಂದಲೂ ಐಎಎಸ್ ಅಧಿಕಾರಿಯಾಗಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ಕನಸು ಕಂಡಿದ್ದ ದಿವ್ಯಾ ಮಿತ್ತಲ್ ಅವರಿಗೆ ಸಾಥ್ ನೀಡಿದವರು ಅವರ ಪತಿ ಗಗನ್ ದೀಪ್ ಸಿಂಗ್. ಗಗನ್ ದೀಪ್ ಸಿಂಗ್ ಕೂಡ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು. ಮದುವೆಯ ನಂತರ ಇಬ್ಬರೂ ಲಂಡನ್ ನಲ್ಲಿ ಒಟ್ಟಿಗೆ ಕೆಲಸಕ್ಕೂ ಸೇರಿಕೊಂಡರು.ಆದರೆ ಲಂಡನ್ ನಲ್ಲಿ ಹೂಡಿಕೆ ಬ್ಯಾಂಕರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ದಿವ್ಯಾ ಅವರಿಗೆ ಅಲ್ಲಿ ಕೆಲಸ ನಿರ್ವಹಿಸುವುದು ಇಷ್ಟವಿಲ್ಲದ ಕಾರಣ ದಂಪತಿಗಳು ಭಾರತಕ್ಕೆ ಬಂದರು.
ಇದಾದ ಬಳಿಕ UPSC ಸಿವಿಲ್ ಸರ್ವೀಸಸ್ ಪರೀಕ್ಷೆ ಎದುರಿಸಲು ಸಿದ್ದರಾದ ದಂಪತಿಗಳು ಯಾವುದೇ ತರಬೇತಿ ಕೇಂದ್ರಗಳಿಗೆ ಸೇರದೇ ಸ್ವಯಂ ಅಧ್ಯಯನವನ್ನು ನಡೆಸಲು ಆರಂಭಿಸಿದರು. ಮೊದಲಿಗೆ ಪರೀಕ್ಷೆ ಬರೆಯಲು ತಯಾರಾದ ದಿವ್ಯಾ ಅವರ ಪತಿ ಗಗನ್ ದೀಪ್ ಸಿಂಗ್ 2011ರಲ್ಲಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದರು. ಇನ್ನು ಇದಾದ ಬಳಿಕ ತನ್ನ ಪತಿಯಿಂದ ಪ್ರೇರಣೆ ಪಡೆದ ದಿವ್ಯಾ ಅವರು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ನಡೆಸಿ ದಿವ್ಯಾ ಅವರು 2012 ರಲ್ಲಿ ಮೊದಲ ಯತ್ನದಲ್ಲೆ ಯುಪಿಎಸ್ಸಿ ಪರೀಕ್ಷೆಯನ್ನು ತೇರ್ಗಡೆಯಾಗಿ ಐಪಿಎಸ್ ಅಧಿಕಾರಿಯಾದರು. ನಂತರ 2013 ರಲ್ಲಿ ಈ ಪರೀಕ್ಷೆಗೆ ಮತ್ತೆ ಹಾಜರಾಗಿ ಐಎಎಸ್ ಅಧಿಕಾರಿಯಾದರು.
ಇನ್ನು ಪ್ರಸ್ತುತ ಮಿರ್ಜಾಪುರದ ಡಿಎಂ ಆಗಿ ಕಾರ್ಯನಿರ್ವಹಿಸುತ್ತಿರುವ ದಿವ್ಯಾ ಮಿತ್ತಲ್ ಅವರು ಇದಕ್ಕೂ ಮೊದಲು ಬರೇಲಿ ಅಭಿವೃದ್ಧಿ ಪ್ರಾಧಿಕಾರದ ವಿಸಿ, ಯುಪಿಎಸ್ ಐಡಿಎ, ಸಿಒ ಗೊಂಡಾ, ಎಸ್ ಡಿಎಂ ಮೀರತ್ ಮತ್ತು ಸೀತಾಪುರ್ ನ ಜಂಟಿ ಎಂಡಿ ಹುದ್ದೆಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದರು.
ಈ ಮೂಲಕ ಜೀವನದಲ್ಲಿ ಛಲವೊಂದಿದ್ದಾರೆ ಯಾವುದೇ ಕೋಂಚಿಗ್ ಕೇಂದ್ರಗಳಿಗೂ ಸೇರದೇ ಸ್ವ-ಪ್ರಯತ್ನದಿಂದಲೇ, ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.