ಮೈಸೂರು, ಫೆ 09 (DaijiworldNews/ AK):ರಾಜ್ಯದಲ್ಲಿ ಭೀಕರ ಬರಗಾಲ ತಾಂಡವಾಡುತ್ತಿದೆ. ಇದರ ಜೊತೆಗೆ ಕುಡಿಯುವ ನೀರಿಗಾಗಿ ಹಾಹಾಕಾರ ಆಗುವ ಸಾಧ್ಯತೆ ಇದೆ. ಹೀಗಿರುವಾಗ ರೈತರು ಮುಂದಿನ ಭವಿಷ್ಯದ ಬಗ್ಗೆ ಯೋಚನೆ ಮಾಡುವ ಪರಿಸ್ಥಿತಿ ಒದಗಿ ಬಂದಿದೆ. ಹೀಗಾಗಿ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ಕೊಡುತ್ತಿದ್ದ ಹಣ ಈಗಿನ ಸರ್ಕಾರ ನಿಲ್ಲಿಸಿರುವುದು ಖಂಡನೀಯ. ಕೂಡಲೇ ಈ ಯೋಜನೆ ಮರು ಜಾರಿ ಮಾಡಬೇಕು ಎಂದು ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಸುತ್ತೂರು ಜಾತ್ರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪಿ.ಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ರೈತರಿಗೆ ಕೇಂದ್ರ ಸರ್ಕಾರ 6 ಸಾವಿರ ನೀಡಿದರೆ, ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ 4 ಸಾವಿರ ಸೇರಿಸಿ ಒಟ್ಟು 10 ಸಾವಿರ ಕೊಡುತ್ತಿತ್ತು. ಇಂದಿನ ರಾಜ್ಯ ಸರ್ಕಾರ ಅದನ್ನು ನಿಲ್ಲಿಸಿ ಬಿಟ್ಟಿದೆ. ರೈತರಿಗೆ ಸಂಕಷ್ಟದ ಸಂದರ್ಭದಲ್ಲಿ ಪ್ರೋತ್ಸಾಹ ಧನ ನೀಡಬೇಕು’ ಎಂದು ಒತ್ತಾಯಿಸಿದರು.
ಮಠ ಮಾನ್ಯಗಳು ಗ್ರಾಮೀಣ ಭಾಗದ ಜನರಿಗೆ ನೀಡುತ್ತಿರುವ ಶಿಕ್ಷಣ, ಅನ್ನ,ಆರೋಗ್ಯ ನೀಡುತ್ತ ಸರ್ಕಾರದ ಮೇಲಿನ ಜವಾಬ್ದಾರಿಯನ್ನ ಕಡಿಮೆ ಮಾಡುತ್ತಿವೆ.ನಾನು ಮುಖ್ಯಮಂತ್ರಿಯಾಗಿದ್ದಾಗ ಮಠ ಮಾನ್ಯಗಳಿಗೆ ಸಾಕಷ್ಟು ಅನುದಾನ ನೀಡಿದ್ದೆ. ಪ್ರಧಾನಿ ಮೋದಿ ಅವರು ಒಂದು ಮಹತ್ತರ ನಿರ್ಧಾರ ಮಾಡಿದ್ದಾರೆ. 1 ಕೆ.ಜಿ ಅಕ್ಕಿಗೆ 29 ರೂ ನಂತೆ ಜನ ಸಾಮಾನ್ಯರಿಗೆ ನೀಡಲು ಮುಂದಾಗಿದ್ದಾರೆ. ಇಂದು 1ಕೆಜಿ ಅಕ್ಕಿಗೆ 50 ರಿಂದ 60 ರೂ ಆಗಿದೆ. ಜನರಿಗೆ ಕಡಿಮೆ ಬೆಲೆಯಲ್ಲಿ ಭಾರತ್ ರೈಸ್ ಎಂಬ ಬ್ರಾಂಡ್ ಅಡಿ ನೀಡಲು ನಿರ್ಧಾರ ಮಾಡಿದ್ದಾರೆ ಇದು ಒಳ್ಳೆಯ ಯೋಜನೆ ಎಂದರು.