ಶಿವಮೊಗ್ಗ, ಫೆ 09 (DaijiworldNews/HR): ದೇಶ ವಿಭಜನೆಯ ಮಾತನಾಡುವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ನಾನು ಹೇಳಿರುವ ಮಾತಿಗೆ ಈಗಲೂ ಬದ್ಧ. ತಾಕತ್ತಿದ್ದರೆ ಕೇಸ್ ಹಾಕಲಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
24 ಗಂಟೆಯೊಳಗೆ ಮಾತನ್ನು ವಾಪಸ್ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಕೇಸ್ ದಾಖಲಿಸಲಾಗುವುದು ಎಂಬ ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಸಚಿವ ಪಾಟೀಲ್ ತಂದೆ ರಾಷ್ಟ್ರ ಭಕ್ತರಾಗಿದ್ದವರು. ಅವರ ಬಗ್ಗೆ ಗೌರವ ಇದೆ. ಅವರು ಕೇಸ್ ಹಾಕಲಿ ಎಂದು ಆಗ್ರಹಿಸುತ್ತೇನೆ. ಆಗ ಕೋರ್ಟ್ ಗೆ ಮಲ್ಲಿಕಾರ್ಜುನ ಖರ್ಗೆ ಸಹ ಬರಬೇಕಾಗುತ್ತದೆ. ನ್ಯಾಯಾಲಯವು ದೇಶ ದ್ರೋಹಿಗಳಿಗೆ ಮನ್ನಣೆ ನೀಡುತ್ತದೆಯೋ, ರಾಷ್ಟ್ರ ಭಕ್ತರಿಗೆ ಮನ್ನಣೆ ನೀಡುತ್ತದೆ ಎಂಬುದು ಗೊತ್ತಾಗುತ್ತದೆ ಎಂದರು.
ಇನ್ನು ಮಂಡ್ಯ ಬಗ್ಗೆ ಮಾತನಾಡಿದ ಅವರು, ಇದಕ್ಕೆ ರಾಜ್ಯ ಸರ್ಕಾರದ ಧೋರಣೆಯೇ ಕಾರಣ. ಬಂದ್ ಯಶಸ್ವಿ ಬಗ್ಗೆ ಸಂತೋಷವಾಗಿಲ್ಲ. ಬದಲಿಗೆ ಈ ದೇಶದಲ್ಲಿ ಹನುಮ ಧ್ವಜ ಹಾರಿಸಲು ಅವಕಾಶ ಇಲ್ಲವಲ್ಲ ಎಂದು ಬೇಸರವಾಗುತ್ತಿದೆ. ಮುಂದೆ ಇದಕ್ಕೆ ಜನರೇ ಉತ್ತರ ನೀಡುತ್ತಾರೆ ಎಂದು ಹೇಳಿದ್ದಾರೆ.