ಜಲೋರ್, ಎ26(Daijiworld News/SS): ದೇಶಕ್ಕೆ ಅನ್ಯಾಯ ಮಾಡಿರುವ ಮೋದಿಗೆ ದೇಶದ ಜನರೇ 'ಚೌಕಿದಾರ್ ಚೋರ್ ಹೈ' ಅಂತಾ ಹೇಳುತ್ತಿದ್ದಾರೆ ಎಂದು ಐಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರಾಜಸ್ಥಾನದ ಜಲೋರ್ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ 'ಅಚ್ಛೆ ದಿನ ಆಯೆಂಗೆ' ಎಂಬ ಘೋಷವಾಕ್ಯ ಈಗ 'ಚೌಕಿದಾರ್ ಚೋರ್ ಹೈ' ಎಂದು ಬದಲಾಗಿರುವುದಾಗಿ ಹೇಳಿ ವ್ಯಂಗ್ಯವಾಡಿದರು.
ಕಳೆದ ಐದು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು 'ಅಚ್ಛೆ ದಿನ ಆಯೆಂಗೆ' ಎಂಬ ಘೋಷವಾಕ್ಯದ ಮೂಲಕ ಚುನಾವಣಾ ಅಖಾಡಕ್ಕೆ ಇಳಿದಿದ್ದರು. ಆದರೆ, ಈಗ ದೇಶದ ಜನರೇ 'ಚೌಕಿದಾರ್ ಚೋರ್ ಹೈ' ಎಂದು ಹೇಳುತ್ತಿದ್ದಾರೆಂದು ರಾಹುಲ್ ಗಾಂಧಿ ದೂರಿದರು.
ಆಡಳಿತ ನಡೆಸಿದ ಐದು ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಅನ್ಯಾಯ ಮಾಡುತ್ತಲೇ ಬಂದಿದ್ದಾರೆ. ಮೋದಿ ಆಡಳಿತದಿಂದ ದೇಶದ ಜನರಿಗೆ ಅನ್ಯಾಯವಾಗಿದೆ ಎಂದು ಕಿಡಿಕಾರಿದರು.
ನೋಟು ನಿಷೇಧ ಹಾಗೂ ಜಿಎಸ್ಟಿ ಅಂತ ನಿರ್ಧಾರಗಳು ಸಣ್ಣ ವ್ಯಾಪಾರಿಗಳನ್ನು ದರೋಡೆ ಮಾಡುತ್ತಿದೆ. ಆದರೆ ಕಾಂಗ್ರೆಸ್ ಹಾಗಲ್ಲ, ಕಾಂಗ್ರೆಸ್ನ ಯೋಜನೆ ಎಲ್ಲರಿಗೂ ಪ್ರಯೋಜನವಾಗಲಿದೆ ಎಂದು ಹೇಳಿದರು.