ದರ್ಬಾಂಗ, ಎ26(Daijiworld News/SS): ಭಯೋತ್ಪಾದನಾ ಕೇಂದ್ರಗಳನ್ನು ಬುಡಸಮೇತ ಕಿತ್ತು ಹಾಕಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಬೃಹತ್ ರ್ಯಾಲಿಯಲ್ಲಿ ಮಾತನಾಡಿದ ಅವರು, ಭಯೋತ್ಪಾದನೆಯಿಂದಾಗಿ ದೇಶದ ಬಡವರು ತೀವ್ರವಾಗಿ ತೊಂದರೆಗೊಳಗಾಗುತ್ತಿದ್ದಾರೆ. ಭಯೋತ್ಪಾದನೆ ಕೃತ್ಯಗಳು ಕಡಿಮೆಯಾದಲ್ಲಿ ದೇಶದ ಸುರಕ್ಷತೆಗೆ ಬಳಸುತ್ತಿರುವ ಹಣವನ್ನು ಬಡವರ ಉದ್ದಾರಕ್ಕೆ ಬಳಕೆ ಮಾಡಬಹುದಾಗಿದೆ ಎಂದು ಹೇಳಿದರು.
ಭಯೋತ್ಪಾದನೆ ಯಾವುದೇ ದೇಶದ ಪ್ರಗತಿಗೆ ಮಾರಕವಾಗಿದೆ. ಇದರಿಂದ ಅಮಾಯಕ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಭಯೋತ್ಪಾದನಾ ಕೇಂದ್ರಗಳನ್ನು ಬುಡಸಮೇತ ಕಿತ್ತುಹಾಕಲಾಗುವುದು ಎಂದು ಮೋದಿ ಭರವಸೆ ನೀಡಿದರು.
ಪ್ರತಿಪಕ್ಷಗಳಿಗೆ ದೇಶದ ಮನಸ್ಥಿತಿಯನ್ನು ಅರಿತುಕೊಳ್ಳಲು ಸಾಧ್ಯವಾಗಿಲ್ಲ. ಕೇವಲ ಕೆಲವೇ ಸ್ಥಾನಗಳಲ್ಲಿ ಸ್ಪರ್ಧಿಸಿರುವ ಕೆಲವರು ಪ್ರಧಾನಿ ಸ್ಥಾನಕ್ಕಾಗಿ ಸರದಿಯಲ್ಲಿದ್ದಾರೆ. ಮಾತ್ರವಲ್ಲ, ಅವರ ಸರದಿಗಾಗಿ ಕಾಯುತ್ತಿದ್ದಾರೆಂದು ಟೀಕಿಸಿದರು.
ದೇಶದ ಮುಂದಿರುವ ಪ್ರಮುಖ ವಿಚಾರಗಳೆಂದರೆ ರಾಷ್ಟ್ರೀಯ ಭದ್ರತೆ ಹಾಗೂ ಭಯೋತ್ಪಾದನೆ. ಭಯೋತ್ಪಾದನೆ ನಿರ್ಮೂಲನೆ ಮಾಡಿ ದೇಶವನ್ನು ರಕ್ಷಿಸುವುದೇ ನಮ್ಮ ಪ್ರಮುಖ ಗುರಿ ಎಂದು ಹೇಳಿದರು.