ಹೊಸದಿಲ್ಲಿ, ಎ26(Daijiworld News/SS): ಒಂದು ವೇಳೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಹೊಣೆ ಎಂದು ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ-ಅಮಿತ್ ಶಾ ರಣತಂತ್ರವನ್ನು ವಿಫಲಗೊಳಿಸಬೇಕೆಂಬ ಏಕೈಕ ಉದ್ದೇಶದಿಂದ ಕಾಂಗ್ರೆಸ್ ಜತೆ ಮೈತ್ರಿಗೆ ನಾವು ಮುಂದಾದೆವು. ಆದರೆ ರಾಹುಲ್ ಮೈತ್ರಿ ನಿರಾಕರಿಸಿದರು. ಹೀಗಾಗಿ ಮೋದಿ ಮತ್ತೆ ಪ್ರಧಾನಿಯಾದರೆ ಅದಕ್ಕೆ ರಾಹುಲ್ ಗಾಂಧಿಯವರೇ ಕಾರಣ ಎಂದು ಕಿಡಿಕಾರಿದ್ದಾರೆ.
ನಮ್ಮ ಗುರಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಸ್ಥಾನದಿಂದ ಹಾಗೂ ಅಮಿತ್ ಶಾರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಸುವುದಾಗಿದೆ. ಈ ನಿಟ್ಟಿನಲ್ಲಿ ನಾವು ಏನು ಬೇಕಾದರೂ ಮಾಡಲು ಸಿದ್ಧರಿದ್ದೇವೆ. ಯಾವುದೇ ಮಹಾಮೈತ್ರಿ ಇದ್ದರೂ ಅದಕ್ಕೆ ನಮ್ಮ ಬೆಂಬಲ ಇರುತ್ತದೆ. ಬಿಜೆಪಿಯು ಅಲ್ಪಸಂಖ್ಯಾತರ ವಿರುದ್ಧವಾಗಿದೆ ಎಂದು ಹೇಳಿದರು.
'ಮೋದಿ-ಶಾ ಜೋಡಿಯನ್ನು ತಡೆಯಲು ನಾವು ಎಲ್ಲ ಪ್ರಯತ್ನ ಮಾಡುತ್ತೇವೆ. ಅಲ್ಪಸಂಖ್ಯಾತರ ವಿರೋಧಿಯಾಗಿರುವ ಬಿಜೆಪಿ ಹೊರತುಪಡಿಸಿ ಬೇರೆ ಯಾವುದೇ ಮೈತ್ರಿಕೂಟದ ಸರಕಾರವನ್ನಾದರೂ ನಾವು ಬೆಂಬಲಿಸುತ್ತೇವೆ ಎಂದು ಹೇಳಿದರು.
2019ರ ಲೋಕಸಭಾ ಚುನಾವಣೆಯು ದೇಶ ಹಾಗೂ ಸಂವಿಧಾನ ರಕ್ಷಿಸಲು ಇದೆ. ನಾವು ಮೊದಲು ಭಾರತೀಯರು, ನಂತರ ಹಿಂದೂ ಹಾಗೂ ಮುಸ್ಲಿಂ ಎಂದು ಹೇಳಿದರು.