ಬೆಂಗಳೂರು,ಫೆ 10(DaijiworldNews/AK):ಕೇಂದ್ರದ ಬಿಜೆಪಿ ಸರಕಾರವು ತಮ್ಮ ಸಾಧನೆಯನ್ನು ಅಂಕಿಅಂಶಗಳ ಶ್ವೇತಪತ್ರದ ಮೂಲಕ ತಿಳಿಸಿದೆ. ಯುಪಿಎ ಅವಧಿಯ ‘ಆಡಳಿತ ರೋಡ್ ಟು ನೋವೇರ್’ ಆಗಿತ್ತು. ರಾಜಕೀಯ ಪ್ರೇರಿತ ಆಡಳಿತ ಅದಾಗಿತ್ತು. ಯುಪಿಎ ಬಿಟ್ಟು ಹೋದ ಆರ್ಥಿಕ ಗೊಂದಲ, ದಿಕ್ಕು ದೆಸೆ ಇಲ್ಲದ ಆಡಳಿತ, ಅವ್ಯವಸ್ಥೆಯನ್ನು ಸರಿಪಡಿಸಿ ಕಷ್ಟದ ಕಾಲದಿಂದ ಒಳ್ಳೆಯ ಕಾಲಕ್ಕೆ ದೇಶವನ್ನು ಒಯ್ದವರು ನರೇಂದ್ರ ಮೋದಿಜೀ ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕೇಂದ್ರದ ಎನ್ಡಿಎ ಸರಕಾರದ ಸಾಧನೆ ಮತ್ತು ಯುಪಿಎ ಸರಕಾರದ ವೈಫಲ್ಯಗಳ ಕುರಿತು ವಿವರಿಸಿದರು.
ಬೆಲೆ ಏರಿಕೆ ಬಗ್ಗೆ ಕಾಂಗ್ರೆಸ್ಸಿಗರು ಮಾತನಾಡುತ್ತಾರೆ. ವಾಜಪೇಯಿ ಅವರ ಆಡಳಿತ ಇದ್ದಾಗ ಹಣದುಬ್ಬರ- ಬೆಲೆ ಏರಿಕೆ ಶೇ 3.9ರಷ್ಟಿತ್ತು. ಕಾಂಗ್ರೆಸ್ನ 10 ವರ್ಷಗಳ ಅವಧಿಯಲ್ಲಿ ಅದು ಸರಾಸರಿ ಶೇ 8.2 ಆಗಿತ್ತು. ಕೋವಿಡ್ ಇದ್ದರೂ, ಜಾಗತಿಕ ಹಣಕಾಸಿನ ಬಿಕ್ಕಟ್ಟು, ಯುದ್ಧಗಳಿದ್ದರೂ ಮೋದಿಜೀ ಅವರ ಆಡಳಿತದಲ್ಲಿ ಬೆಲೆ ಏರಿಕೆ ಸರಾಸರಿ ಶೇ 5ರಷ್ಟಿದೆ. ವಿಶ್ವದ ಎಲ್ಲೆಡೆ ಬೆಲೆ ಏರಿಕೆ ಇದೆ. ವಾಸ್ತವವಾಗಿ ಯುಪಿಎ ಅವಧಿಯಲ್ಲಿ ಬೆಲೆ ಏರಿಕೆ ಇದ್ದುದು ಎದ್ದು ಕಾಣುವಂತಿತ್ತು ಎಂದು ವಿವರಿಸಿದರು.
ವಾಜಪೇಯಿ ಅವರ ಕಾಲದಲ್ಲಿ ಶೇ 8ರಷ್ಟು ಜಿಡಿಪಿ ಮೂಲಕ ಅಭಿವೃದ್ಧಿ ಇತ್ತು. ಆದರೆ, ಯುಪಿಎ ಕಾಲದಲ್ಲಿ ಬೆಲೆ ಏರಿಕೆ ಇದ್ದರೂ ಬೆಳವಣಿಗೆ ಕಡಿಮೆ ಇತ್ತು. ಕಾಂಗ್ರೆಸ್ ಅವಧಿಯದು ಶೇ 5ಷ್ಟು ಅಭಿವೃದ್ದಿ ಮಾತ್ರ ಎಂದು ಅವರು ಆರೋಪಿಸಿದರು. ಮೋದಿಯವರ ಅವಧಿಯಲ್ಲಿ ಶೇ 8ರಿಂದ 9ರಷ್ಟು ಬೆಳವಣಿಗೆಯನ್ನು ನಾವು ಕಾಣುತ್ತಿದ್ದೇವೆ ಎಂದು ನುಡಿದರು.