ಬೆಂಗಳೂರು,ಏ 26 (Daijiworld News/MSP): ನಾವೆಲ್ಲರೂ ಅಣ್ಣ -ತಮ್ಮಂದಿರಿದ್ದಂತೆ ಹೀಗಾಗಿ ಸಹೋದರ ರಮೇಶ್ ಜಾರಕಿಹೊಳಿ ನನಗೆ ಎರಡೇಟು ನೀಡಿದರು ತೊಂದರೆಯಿಲ್ಲ. ಕುಟುಂಬ ಎಂದ ಮೇಲೆ ಸಹೋದರ ಮದ್ಯೆ ಭಿನ್ನಾಭಿಪ್ರಾಯ ಸಹಜ ಹಾಗೆಂದು ಸಂಬಂಧ ಕಡಿದುಕೊಳ್ಳಲು ಸಾಧ್ಯನಾ ಎಂದು ಡಿ. ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಪ್ರಮುಖ ನಾಯಕರ ಸಭೆ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ಕಾಂಗ್ರೆಸ್ ಕುಟುಂಬ ಓಡೆದ ಕುಟುಂಬವಲ್ಲ. ನಾವೆಲ್ಲರೂ ಇಲ್ಲಿ ಸಹೋದರರು ಹೀಗಾಗಿ ವೈಮನಸ್ಸು ಸಹಜ. ಎಲ್ಲವೂ ಸರಿ ಹೋಗಲಿದೆ ಎಂದು ರಮೇಶ್ ಜಾರಕಿಹೊಳಿಯ ಬಂಡಾಯಕ್ಕೆ ತೇಪೆ ಹಚ್ಚುವ ಪ್ರಯತ್ನ ನಡೆಸಿದರು.
ನನ್ನ ಜತೆ 10 ಜನ ಶಾಸಕರಿದ್ದು, ನಾವೆಲ್ಲರೂ ಒಗ್ಗಟ್ಟಾಗಿ ರಾಜೀನಾಮೆ ಕೊಡುತ್ತೇವೆ ಎಂಬ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, ಅವರ ಜತೆ 10 ಜನ ಶಾಸಕರಲ್ಲ. ಕಾಂಗ್ರೆಸ್ನ ಎಲ್ಲ 80 ಶಾಸಕರು ಕೂಡಾ ರಮೇಶ್ ಜಾರಕಿಹೊಳಿ ಜೊತೆಯಲ್ಲಿ ಇರುತ್ತೇವೆ ಎಂದರು.
ಸತೀಶ್ ಜಾರಕಿಹೊಳಿ ಅವರನ್ನು ಮುಖ್ಯಮಂತ್ರಿ ಮಾಡಿ ಎಂದು ರಮೇಶ್ ಅವರೇ ಹೇಳಿದ್ದರು. ನಾವು ಸತೀಶ್ ಅವರನ್ನು ಮುಖ್ಯಮಂತ್ರಿ ಮಾಡಿಲ್ಲ ಎಂದು ಪಕ್ಷ ಬಿಟ್ಟು ಹೋಗುತ್ತಾರಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು. ಸರ್ಕಾರ ಪತನವಾಗಲಿದೆ ಎಂದು ಯಾವ ಕಾಂಗ್ರೆಸ್ ಶಾಸಕರು ಹೇಳಿಲ್ಲ. ಅವರು ಅವರ ಕೆಲಸ, ಜವಾಬ್ದಾರಿ ನಿರ್ವಹಿಸಿಕೊಂಡು ತಮ್ಮ ಪಾಡಿಗೆ ಇದ್ದಾರೆ .ಸುದ್ದಿಗಾಗಿ ಏನೇನೋ ಪ್ರಶ್ನೆ ಕೇಳಿ ನೀವೆ ಸದ್ದುಮಾಡುತ್ತೀರಿ ಎಂದು ಪತ್ರಕರ್ತರತ್ತ ಬೊಟ್ಟು ಮಾಡಿದರು.