ಬೆಂಗಳೂರು, ಫೆ 10(DaijiworldNews/SK): ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣಪ್ರತಿಷ್ಠೆ ಜ ೨೨ರಂದು ಶಾಸ್ತ್ರೋಕ್ತವಾಗಿ ಸಂಪನ್ನಗೊಂಡ ನಂತರ ಭಾರತದಲ್ಲಿ ಹೊಸ ಪ್ರಯಾಣ ಆರಂಭವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಸಂಸತ್ತಿನಲ್ಲಿ ರಾಮಮಂದಿರ ಪ್ರಸ್ತಾವನೆ ಕುರಿತ ಚರ್ಚೆಯಲ್ಲಿ ಮಾತನಾಡಿದ ಅಮಿತ್ ಶಾ ಅವರು, ಜನವರಿ 22 ರ ದಿನವು ಹತ್ತು ಸಾವಿರ ವರ್ಷಗಳ ಇತಿಹಾಸದಲ್ಲಿ ನೆನಪಿನಲ್ಲಿ ಇಡುವ ದಿನವಾಗಲಿದೆ. ರಾಮನಿಲ್ಲದ ದೇಶವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ರಾಮ ಮಂದಿರ ಸ್ಥಾಪನೆ ಅದೃಷ್ಟದ ವಿಚಾರವಾಗಿದ್ದು, ಈ ವಿಚಾರದಲ್ಲಿ ನಮ್ಮ ಪೀಳಿಗೆ ಅತ್ಯಂತ ಅದೃಷ್ಟಶಾಲಿಯಾಗಿದೆ.
ಇನ್ನು, ಸುಮಾರು 500 ವರ್ಷಗಳ ನಂತರ ಕಾನೂನು ಹೋರಾಟ ಕೊನೆಗೊಂಡಿದೆ. ನಾನು ರಾಮ ಮಂದಿರಕ್ಕಾಗಿ ಹೋರಾಡಿದ ಎಲ್ಲಾ ಯೋಧರನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ. ಮೋದಿಯವರ ಕಾಲದಲ್ಲಿ ಈ ಕನಸು ನನಸಾಗಬೇಕಿತ್ತು. ರಾಮ ಮಂದಿರ ನಿರ್ಮಾಣಕ್ಕೆ ಧರ್ಮಕ್ಕೆ ಸಂಬಂಧ ಕಲ್ಪಿಸಬಾರದು. ರಾಮ ದೇಶದ ಜನರ ಆತ್ಮ. ರಾಮಾಯಣವನ್ನು ಹಲವು ದೇಶಗಳು ಒಪ್ಪಿಕೊಂಡಿವೆ ಎಂದು ತಿಳಿಸಿದ್ದಾರೆ.