ಬೆಂಗಳೂರು, ಫೆ(DaijiworldNews/SK): ರಾಜ್ಯದ ಹಳೆ ವಾಹನಗಳಿಗೆ ನಂಬರ್ ಪ್ಲೇಟ್ ಬದಲಾಯಿಸಿ ಅತೀ ಸುರಕ್ಷತಾ ನೋಂದಣಿ ಫಲಕ (ಎಚ್ಎಸ್ಆರ್ಪಿ) ಅಳವಡಿಕೆಗೆ ನೀಡಲಾಗಿದ್ದ ಕೊನೆಯ ದಿನ ಸಮೀಪಿಸುತ್ತಿರುವ ಬೆನ್ನಲ್ಲೇ ಮಾಲೀಕರು ಅವಧಿ ವಿಸ್ತರಣೆಗೆ ಒತ್ತಾಯಿಸುತ್ತಿದ್ದಾರೆ.
2019ರ ಏಪ್ರಿಲ್ ನಂತರ ನೋಂದಣಿಯಾದ ಎಲ್ಲ ವಾಹನಗಳಿಗೂ ಎಚ್ಎಸ್ಆರ್ಪಿ ಅಳವಡಿಸಲಾಗಿದೆ. ಆದರೆ, ಅದಕ್ಕಿಂತ ಮುಂಚೆ ನೋಂದಣಿಯಾದ ವಾಹನಗಳು ಎಚ್ಎಸ್ಆರ್ಪಿ ಅಳವಡಿಸಿಕೊಂಡಿಲ್ಲ. ಹೀಗಾಗಿ 2019ರ ಏಪ್ರಿಲ್ಗಿಂತ ಮುಂಚೆ ನೋಂದಣಿಯಾದ ವಾಹನಗಳಿಗೆ ಏಕರೂಪ ನೋಂದಣಿ ಫಲಕ ಅಳವಡಿಕೆ ಹಾಗೂ ವಾಹನಗಳ ಸುರಕ್ಷತೆ ಮತ್ತು ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಸಲುವಾಗಿ ಕಡ್ಡಾಯವಾಗಿ ಎಚ್ಎಸ್ಆರ್ಪಿ ಅಳವಡಿಸಿಕೊಳ್ಳುವಂತೆ ಸಾರಿಗೆ ಇಲಾಖೆ ಆದೇಶಿಸಿತ್ತು.
ಆದರೆ ಇದೀಗಾ ಈ ಬಗ್ಗೆ ಪ್ರತಿಕ್ರಿಯಿಸಿರುವ ವಾಹನ ಮಾಲಿಕರು, ಎಚ್ಎಸ್ಆರ್ಪಿ ಬುಕಿಂಗ್ ವೇಳೆ ಸರ್ವರ್ ಮೇಲಿನ ಒತ್ತಡದಿಂದ ಆಗಬಹುದಾದ ನಿಧಾನಗತಿಯಿಂದ ಹಿಡಿದು ಹತ್ತುಹಲವು ತಾಂತ್ರಿಕ ತೊಂದರೆಗಳು ಕಂಡು ಬರುತ್ತಿದ್ದು, ಹೀಗಾಗಿ ಫೆ. 17ರ ಒಳಗಾಗಿ ಬುಕಿಂಗ್ ಮತ್ತು ಅಳವಡಿಕೆ ಮಾಡಲು ಸಾಧ್ಯವಿಲ್ಲ.
ಇನ್ನು ಬಹುತೇಕರು ತಮ್ಮದಲ್ಲದ ತಪ್ಪಿಗೆ ಅಳವಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕನಿಷ್ಠ ಇನ್ನೂ ಒಂದು ತಿಂಗಳಾದರೂ ಗಡುವು ವಿಸ್ತರಣೆ ಮಾಡಬೇಕು ಎಂದು ವಾಹನಗಳ ಮಾಲೀಕರು ಒತ್ತಾಯಿಸಿದ್ದಾರೆ.