ಭುವನೇಶ್ವರ, ಫೆ 11 (DaijiworldNews/SK): ಬಿಜು ಜನತಾದಳದ (ಬಿಜೆಡಿ) ಹಿರಿಯ ನಾಯಕಿ ಹಾಗೂ ಒಡಿಶಾ ವಿಧಾನಸಭೆಯಲ್ಲಿ 10 ಬಾರಿ ಶಾಸಕಿಯಾಗಿದ್ದ ವಿ. ಸುಜ್ಞಾನ ಕುಮಾರಿ ದೇವೊ ಅವರು ಶನಿವಾರ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಗಿದೆ.
87 ವರ್ಷ ವಯಸ್ಸಿನ ಸುಜ್ಞಾನ ಕುಮಾರಿ ಅವರು ಖಲ್ಲಿಕೋಟ್ ರಾಜಮನೆತನಕ್ಕೆ ಸೇರಿದವರು. 1963ರಲ್ಲಿ ಮೊದಲ ಬಾರಿಗೆ ಒಡಿಶಾ ವಿಧಾನಸಭೆ ಪ್ರವೇಶಿಸಿದ್ದ ದೇವ್, ಖಲ್ಲಿಕೋಟೆಯಿಂದ ಎಂಟು ಬಾರಿ ಮತ್ತು ಕವಿಸೂರ್ಯನಗರ್ ಕ್ಷೇತ್ರದಿಂದ ಎರಡು ಸಲ ಆಯ್ಕೆಯಾಗಿದ್ದರು. ಭಾರೀ ಜನಬೆಂಬಲವನ್ನು ಹೊಂದಿದ್ದ ಅವರು ಖಲ್ಲಿಕೋಟ್ ರಾಣಿ ’ಎಂದೇ ಜನಪ್ರಿಯರಾಗಿದ್ದರು.
ಇನ್ನು ದೇವ್ ಅವರ ಪಾರ್ಥಿವ ಶರೀರವನ್ನು ವಿಶೇಷ ವಿಮಾನದ ಮೂಲಕ ಚೆನ್ನೈನಿಂದ ಗಂಜಾಂ ಜಿಲ್ಲೆಯ ಖಲ್ಲಿಕೋಟೆಗೆ ಕೊಂಡೊಯ್ಯುವ ಮುನ್ನ ಒಡಿಶಾ ವಿಧಾನಸಭೆ ಆವರಣಕ್ಕೆ ತರಲಾಗುವುದು ಎಂದು ಹಣಕಾಸು ಸಚಿವ ಬಿ.ಕೆ.ಅರುಖಾ ತಿಳಿಸಿದ್ದಾರೆ. ನಂತರ ರಾಜಮನೆತನದ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ತಿಳಿದು ಬಂದಿದೆ.