ಬೆಂಗಳೂರು, ಏ 26 (Daijiworld News/MSP): ತನ್ನ ದಿನನಿತ್ಯದ ಅಭ್ಯಾಸದಂತೆ ಟೆರೇಸ್ ನಲ್ಲಿ ಯೋಗಾಭ್ಯಾಸ ಮಾಡುತ್ತಿದ್ದ ಹದಿನೇಳು ವರ್ಷದ ಯುವತಿಯೊಬ್ಬಳು ಆಯತಪ್ಪಿ ಕೆಳಕ್ಕೆ ಬಿದ್ದು ಸಾವನಪ್ಪಿದ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಮೃತಪಟ್ಟವಳನ್ನು ಪ್ರಿಯಾಂಕಾ ಪಾಲ್ (17 ) ಎಂದು ಗುರುತಿಸಲಾಗಿದ್ದು, ಈಕೆ ರಾಮಕೃಷ್ಣಪುರದಲ್ಲಿನ ಸಿತಾರಾ ಅಪಾರ್ಟ್ ಮೆಂಟ್ ನಲ್ಲಿ ತನ್ನ ಹೆತ್ತವರೊಂದಿಗೆ ವಾಸವಾಗಿದ್ದಳು. ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು ಎಂದು ತಿಳಿದು ಬಂದಿದೆ.
ಏ.25 ರ ಗುರುವಾರದಂದು ಬೆಳಿಗ್ಗೆ ಪೋಷಕರು ಮನೆಕೆಲಸದಲ್ಲಿ ತೊಡಗಿಸಿಕೊಂಡಾಗ ತನ್ನ ನಿತ್ಯದ ಅಭ್ಯಾಸದಂತೆ ಟೆರೇಸ್ ಮೇಲೇರಿ ಯೋಗಾಭ್ಯಾಸದಲ್ಲಿ ತೊಡಗಿದ್ದಾಳೆ. ಆದರೆ ಈ ಸಂದರ್ಭ ಅಚಾನಕ್ ಆಗಿ ಟೇರೆಸ್ ಮೇಲಿನಿಂದ ಆಯತಪ್ಪಿ ಬಿದ್ದ ಪ್ರಿಯಾಂಕಾ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಮೃತ ಯುವತಿ ಕೋಲ್ಕತ್ತಾ ಮೂಲದವಳಾಗಿದ್ದು, ಸಿಸಿ ಟಿವಿ ಪೂಟೇಜ್ ಪರಿಶೀಲಿಸಿದ ಪೊಲೀಸರು ಆತ್ಮಹತ್ಯೆಯಲ್ಲ ಎಂದಿದ್ದಾರೆ. ಸಾಫ್ಟ್ ವೇರ್ ಸಂಸ್ಥೆಯಲ್ಲಿ ಉದ್ಯೋಗಿಯಾಗಿರುವ ತಂದೆ ಅಂಜನ್ ಕುಮಾರ್ ಪಾಲ್ ಕೂಡಾ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಹೇಳಿಕೆ ನೀಡಿದ್ದಾರೆ.
ಯೋಗಾಸನದಲ್ಲಿ ತೊಡಗಿದ್ದ ಆಕೆ ವಾಟರ್ ಪೈಪ್ ಲೈನ್ ದಾಟಿ ಟೆರೇಸ್ ನಿಂದ ಬಿದ್ದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಸೂರ್ಯ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.