ಹೊಸದಿಲ್ಲಿ, ಎ26(Daijiworld News/SS): ದೇಶದಲ್ಲಿಯೇ ಭಾರೀ ಸಂಚಲನ ಮೂಡಿಸಿದ್ದ ವಾರಾಣಸಿ ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸದಿರುವುದು ಬೇಸರ ತಂದಿದೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಪ್ರಿಯಾಂಕಾ ಅವರು ಸಕ್ರಿಯ ರಾಜಕೀಯಕ್ಕೆ ಕಾಲಿಟ್ಟ ದಿನದಿಂದಲೂ ಅವರು ವಾರಾಣಸಿಯಲ್ಲಿ ಪ್ರಧಾನಿ ವಿರುದ್ಧ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿತ್ತು. ಜತೆಗೆ ರಾಹುಲ್ ಗಾಂಧಿ ಬಯಸಿದರೆ ವಾರಾಣಸಿಯಿಂದ ಸ್ಪರ್ಧಿಸಲು ಸಿದ್ಧ ಎಂದು ಪದೇಪದೆ ಹೇಳುತ್ತಿದ್ದರು. ಆದರೆ ಅಂತಿಮ ಹಂತದಲ್ಲಿ ಪ್ರಿಯಾಂಕಾ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಅರುಣ್ ಜೇಟ್ಲಿ ಟ್ವೀಟ್ ಮಾಡಿದ್ದಾರೆ.
ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ವಾರಾಣಸಿಯ ಅಭ್ಯರ್ಥಿಯಾಗಿ ಘೋಷಿಸದಿರುವ ಕಾಂಗ್ರೆಸ್ ಪಕ್ಷದ ನಿರ್ಧಾರದಿಂದ ನನಗೆ ಬೇಸರವಾಗಿದೆ. ಕಳೆದೆರಡು ತಿಂಗಳಿಂದ ಪ್ರಿಯಾಂಕಾ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಭಾರತ ಬದಲಾಗಿದೆ, ವಂಶಾಡಳಿತಕ್ಕೆ ಮನ್ನಣೆ ಸಿಗುತ್ತಿಲ್ಲ. ಅವರು ಸ್ಪರ್ಧೆಯಿಂದ ಹಿಂದೆ ಸರಿದಿರುವುದಕ್ಕೆ ಇದುವೇ ಮುಖ್ಯ ಕಾರಣ ಎಂದು ಹೇಳಿದ್ದಾರೆ.
ಮೋದಿ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸುತ್ತಾರೆ, ಪ್ರಬಲ ಪೈಪೋಟಿ ನೀಡುತ್ತಾರೆ ಎಂದೆಲ್ಲಾ ಕಾಂಗ್ರೆಸ್ ಕಳೆದೊಂದು ವಾರದಿಂದ ಹೇಳಿಕೆ ಕೊಟ್ಟಿತ್ತು. ಈ ಬಗ್ಗೆ ಖುದ್ದು ಪ್ರಿಯಾಂಕಾ ನಿತ್ಯವೂ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಲೇ ಬಂದರು. ರಾಹುಲ್ ಕೂಡ ಅಭ್ಯರ್ಥಿ ಘೋಷಣೆ ಕೊನೆ ಕ್ಷಣದವರೆಗೂ ಸಸ್ಪೆನ್ಸ್ ಇರಲಿದೆ ಎಂದು ಹೇಳಿ ಕುತೂಹಲ ಮೂಡಿಸಿದ್ದರು. ಪಾಪ ಅದೇನಾಯಿತೋ ಗೊತ್ತಿಲ್ಲ. ಅಜಯ್ ರಾಯ್ ಅವರನ್ನು ಅಖಾಡಕ್ಕೆ ಇಳಿಸಿ ನಮ್ಮ ಕುತೂಹಲಕ್ಕೆ ಭಾರಿ ಬೇಸರ ಮೂಡಿಸಿದ್ದಾರೆ ಎಂದು ಜೇಟ್ಲಿ ಹೇಳಿದ್ದಾರೆ.