ಬೆಂಗಳೂರು, ಫೆ 11 (DaijiworldNews/HR): ರಾಜ್ಯದ ಎಲ್ಲ 28 ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕೆಂಬ ನಿಟ್ಟಿನಲ್ಲಿ ಕಾರ್ಯತಂತ್ರವನ್ನು ರೂಪಿಸಲಾಗಿದೆ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಸೇರಿ 27 ಸ್ಥಾನಗಳು ನಮ್ಮದಾಗಿವೆ. ಇನ್ನೊಂದು ಸೀಟು ಗೆದ್ದರೆ ಶೇ 100 ಸೀಟುಗಳು ನಮ್ಮದಾಗಲಿವೆ. ಆ ನಿಟ್ಟಿನಲ್ಲಿ ಎಲ್ಲ ಕಾರ್ಯತಂತ್ರ ರೂಪಿಸಲು ತೀರ್ಮಾನ ಮಾಡಲಾಗಿದೆ ಎಂದರು.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಯಾವ ಯಾವ ವಿಷಯ ಮುನ್ನೆಲೆಗೆ ಬರಬಹುದು, ಕಾಂಗ್ರೆಸ್ನ ಯೋಜನೆ ಏನಿದೆ ಎಂಬ ಕುರಿತು ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಲಾಗಿದೆ ಎಂದು ವಿವರಿಸಿದರು. ಸಿದ್ದರಾಮಯ್ಯನವರು ದುರುದ್ದೇಶದ ಕಾರಣಕ್ಕೋಸ್ಕರ ದೆಹಲಿಯಲ್ಲಿ ಚಳವಳಿ ಮಾಡಿದ್ದಾರೆ. ರಾಷ್ಟ್ರೀಯತೆ ವಿರುದ್ಧ ಪ್ರಾದೇಶಿಕ ಭಾವನೆ ಎತ್ತಿ ಕಟ್ಟಬೇಕೆಂಬ ಸಂಚು ನಡೆಸಿರುವುದು ಅದರಲ್ಲಿ ವ್ಯಕ್ತವಾಗುತ್ತದೆ. ವಾಸ್ತವಿಕವಾಗಿ ಈ ಹಿಂದೆ ಮನಮೋಹನ್ ಸಿಂಗ್ ಅವರು ಅಧಿಕಾರದಲ್ಲಿದ್ದಾಗ 10 ವರ್ಷಗಳಲ್ಲಿ ತೆರಿಗೆ ಹಂಚಿಕೆ ಮತ್ತು ಅನುದಾನದ (ಗ್ರಾಂಟ್ಸ್ ಇನ್ ಏಯ್ಡ್) ರೂಪದಲ್ಲಿ ಎರಡೂ ಸೇರಿ 1 ಲಕ್ಷದ 42 ಸಾವಿರ ಕೋಟಿ ಕೊಟ್ಟಿದ್ದರು. ನರೇಂದ್ರ ಮೋದಿಯವರ ಸರಕಾರವು ಈಗ ಎರಡೂ ವಿಭಾಗಗಳಡಿ ಒಟ್ಟು 4 ಲಕ್ಷದ 91 ಸಾವಿರ ಕೋಟಿಯನ್ನು ಕೊಟ್ಟಿದೆ. ಸುಮಾರು 3 ಲಕ್ಷದ 49 ಸಾವಿರ ಕೋಟಿ ರೂಪಾಯಿ ಹೆಚ್ಚುವರಿಯಾಗಿ ಕೊಟ್ಟರೂ ಕೂಡ ತಪ್ಪು ಅಭಿಪ್ರಾಯ ಮೂಡಿಸಬೇಕೆಂಬ ಕಾರಣಕ್ಕಾಗಿ ಹೀಗೆ ಮಾಡಿದ್ದಾರೆ. ಅವರ ಖಜಾನೆ ಖಾಲಿ ಆಗಿರಬಹುದು; ಆ ಕಾರಣಕ್ಕೆ ವೈಫಲ್ಯ ಮುಚ್ಚಿ ಹಾಕಲು ವಿಷಯಾಂತರ ಮಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಅನ್ಯಾಯ ಆಗುತ್ತಿದೆ ಎಂದು ಜನರ ಮುಂದೆ ಬಿಂಬಿಸುವ ಉದ್ದೇಶದಿಂದ ಈ ಟೂಲ್ ಕಿಟ್ ಬಳಸಿದ್ದಾರೆ ಎಂಬ ವಿಷಯ ಸಭೆಯಲ್ಲಿ ಚರ್ಚೆ ಆಗಿದೆ. ರೈಲ್ವೆ, ರಸ್ತೆ, ಯಾವ್ಯಾವ ಸಹಾಯಧನ ಎಷ್ಟು ಬಂದಿದೆ, ತೆರಿಗೆ ಹಂಚಿಕೆ ಎಷ್ಟು? ಎಂಬ ಸಮಗ್ರ ಮಾಹಿತಿಯನ್ನು ಜನರಿಗೆ ತಲುಪಿಸಲು ಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದು ವಿವರಿಸಿದರು. ಮುಂದಿನ ದಿನಗಳಲ್ಲಿ ಸಮಗ್ರ ಮಾಹಿತಿಯನ್ನು ಜನರಿಗೆ ತಲುಪಿಸಲಿದ್ದೇವೆ ಎಂದು ಹೇಳಿದರು. ಕಾಂಗ್ರೆಸ್ನ ಯೋಜನೆಯನ್ನು ಬಯಲಿಗೆ ಎಳೆಯುತ್ತೇವೆ ಎಂದು ತಿಳಿಸಿದರು.
ಕೇಂದ್ರ ಸಚಿವ ಅಮಿತ್ ಶಾ ಅವರ ಉಪಸ್ಥಿತಿಯಲ್ಲಿ ಮೈಸೂರು ಕ್ಲಸ್ಟರ್ ಸಭೆ ನಡೆಯಿತು. ಕರ್ನಾಟಕ ಚುನಾವಣಾ ಸಹಪ್ರಭಾರಿ ರಾಧಾಮೋಹನ್ ದಾಸ್ ಅಗರವಾಲ್, ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾಜರಿದ್ದರು.
ಕೋರ್ ಕಮಿಟಿ ಸಭೆಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಕರ್ನಾಟಕ ಚುನಾವಣಾ ಸಹಪ್ರಭಾರಿ ರಾಧಾಮೋಹನ್ ದಾಸ್ ಅಗರವಾಲ್, ವಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಸದಾನಂದ ಗೌಡ, ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಬಿ.ಶ್ರೀರಾಮುಲು, ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸಂಸದ ಮತ್ತು ನಿಕಟಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪುದುಚೇರಿ ಉಸ್ತುವಾರಿ ಮತ್ತು ಮಾಜಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾಣ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ ಅವರು ಭಾಗವಹಿಸಿದ್ದರು.