ನವದೆಹಲಿ, ಫೆ 12 (DaijiworldNews/MS): ಭಾರತಕ್ಕೆ ಪ್ರಮುಖ ರಾಜತಾಂತ್ರಿಕ ವಿಜಯ ದೊರಕ್ಕಿದ್ದು, ಇಸ್ರೇಲ್ ಪರ ಬೇಹುಗಾರಿಕೆ ನಡೆಸಿದ ಆರೋಪದಡಿ ಕುವೈಟ್ನ ಕತಾರ್ನಲ್ಲಿ ಮರಣದಂಡನೆಗೆ ಗುರಿಯಾಗಿದ್ದ ಭಾರತೀಯ ನೌಕಾ ಪಡೆಯ 8 ಮಂದಿ ಮಾಜಿ ಸಿಬ್ಬಂದಿಯನ್ನು ಬಿಡುಗಡೆ ಮಾಡಿದೆ.
ಭಾರತವು ರಾಜತಾಂತ್ರಿಕವಾಗಿ ನಡೆಸಿದ ಮಾತುಕತೆ ಹಾಗೂ ಸತತ ಕಾನೂನು ಹೋರಾಟಗಳ ಫಲವಾಗಿ ಗಲ್ಲುಶಿಕ್ಷೆಯನ್ನು ರದ್ದುಗೊಳಿಸಿ ಅಲ್ಲಿನ ಕೋರ್ಟ್ ತೀರ್ಪು ನೀಡಿತ್ತು.
ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA), ಸೋಮವಾರ ಮುಂಜಾನೆ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಖಾಸಗಿ ಸಂಸ್ಥೆಯಾದ ಅಲ್ ದಹ್ರಾ ಗ್ಲೋಬಲ್ ಕಂಪನಿಯಲ್ಲಿ ಕೆಲಸ ಮಾಡುವ ಎಂಟು ಭಾರತೀಯ ನೌಕಾಪಡೆಯ ಮಾಜಿ ಸಿಬ್ಬಂದಿಗಳಲ್ಲಿ ಏಳು ಮಂದಿ ಕತಾರ್ನಿಂದ ಭಾರತಕ್ಕೆ ಮರಳಿದ್ದಾರೆ ಎಂದು ತಿಳಿಸಿದೆ.ಭಾರತೀಯ ಪ್ರಜೆಗಳ ಬಿಡುಗಡೆಗೆ ಮನೆಗೆ ಬರುವುದನ್ನು ಸಕ್ರಿಯಗೊಳಿಸಿದ ಕತಾರ್ ರಾಜ್ಯದ ಅಮೀರ್ ಅವರ ನಿರ್ಧಾರವನ್ನು ನಾವು ಪ್ರಶಂಸಿಸುವುದಾಗಿ ಇದೇ ವೇಳೆ ಹೇಳಿಕೆ ತಿಳಿಸಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ, ಅಲ್ ದಹ್ರಾ ಗ್ಲೋಬಲ್ ಪ್ರಕರಣದಲ್ಲಿ ಬಂಧಿತರಾದ ಎಂಟು ಭಾರತೀಯ ನೌಕಾಪಡೆಯ ಯೋಧರ ಮರಣದಂಡನೆಯನ್ನು ಕತಾರ್ ನ್ಯಾಯಾಲಯವು ರದ್ದುಗೊಳಿಸಿತು. ಮರಣದಂಡನೆಯನ್ನು ಜೈಲು ಶಿಕ್ಷೆಗೆ ಇಳಿಸಲಾಗಿತ್ತು. ನೌಕಾಪಡೆಯ ಸಿಬ್ಬಂದಿಗಳಿಗೆ ಮರಣದಂಡನೆ ವಿಧಿಸಿದ ವಿರುದ್ಧ ಭಾರತ ಸರ್ಕಾರ ಸಲ್ಲಿಸಿದ ಮೇಲ್ಮನವಿಯನ್ನು ಕತಾರ್ನ ನ್ಯಾಯಾಲಯವು ಸ್ವೀಕರಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಕ್ಯಾಪ್ಟನ್ ನವತೇಜ್ ಸಿಂಗ್ ಗಿಲ್, ಕ್ಯಾಪ್ಟನ್ ಬೀರೇಂದ್ರ ಕುಮಾರ್ ವರ್ಮಾ, ಕ್ಯಾಪ್ಟನ್ ಸೌರಭ್ ವಸಿಷ್ಟ್, ಕಮಾಂಡರ್ ಅಮಿತ್ ನಾಗ್ಪಾಲ್, ಕಮಾಂಡರ್ ಪೂರ್ಣೇಂದು ತಿವಾರಿ, ಕಮಾಂಡರ್ ಸುಗುಣಾಕರ್ ಪಕಲಾ, ಕಮಾಂಡರ್ ಸಂಜೀವ್ ಗುಪ್ತಾ ಮತ್ತು ಸೈಲರ್ ರಗೇಶ್ ಕತಾರ್ನಲ್ಲಿ ಬಂಧಿತರಾಗಿರುವ ಎಂಟು ಮಂದಿ ಭಾರತೀಯ ನೌಕಾಪಡೆಯ ಅಧಿಕಾರಿಗಳಾಗಿದ್ದರು.
ಭಾರತಕ್ಕೆ ಬಂದಿಳಿದ ನೌಕಾಪಡೆಯ ಮಾಜಿ ಸಿಬ್ಬಂದಿಗಳು, ಪ್ರಕರಣದಲ್ಲಿ ಇತ್ಯರ್ಥಗೊಳಿಸಲು ನೆರವಾದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು.