ಬೆಂಗಳೂರು, ಫೆ 13 (DaijiworldNews/AA): ಕೇಂದ್ರ ಸರ್ಕಾರ ಭಾರತ್ ಅಕ್ಕಿಯನ್ನು ಪ್ರಚಾರಕ್ಕಾಗಿ ಕೊಡುತ್ತಿದೆ ಎಂದು ಆಹಾರ ಮತ್ತು ನಾಗರೀಕ ಸಚಿವ ಮುನಿಯಪ್ಪ ಆರೋಪಿಸಿದ್ದಾರೆ.
ನಾವು ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೇಳಿದಾಗ ಕೇಂದ್ರ ಸರ್ಕಾರ ನೀಡಲಿಲ್ಲ. ನಾವು 34 ರೂ. ಗೆ ಅಕ್ಕಿ ನೀಡುತ್ತೇವೆ ಅಂದರೂ ನಮಗೆ ಅಕ್ಕಿ ನೀಡಿಲ್ಲ. ನಮಗೆ ಅಕ್ಕಿ ನೀಡಿದ್ರೆ 34 ರೂ. ಗೆ ನೀಡುತ್ತಿದ್ದೆವು. ಅವರು ರಾಜಕೀಯ ಉದ್ದೇಶದಿಂದ ನಮಗೆ ಅಕ್ಕಿ ನೀಡಲಿಲ್ಲ. ಇದೀಗ ಕೇಂದ್ರ ಭಾರತ್ ಅಕ್ಕಿ ಹೆಸರಿನಲ್ಲಿ 1 ಕೆಜಿಗೆ 29 ರೂ.ಗೆ ನಷ್ಟ ಮಾಡಿಕೊಂಡು ಜನರಿಗೆ ಅಕ್ಕಿ ನೀಡುತ್ತಿದ್ದು, ಆರ್ಥಿಕ ವ್ಯವಸ್ಥೆ ಹಾಳು ಮಾಡುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಕೇಂದ್ರ ಅಕ್ಕಿ ನೀಡದೇ ನಾವು ಬೇರೆ ರಾಜ್ಯದಿಂದ ಅಕ್ಕಿ ತರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆದ್ದರಿಂದ ನಮ್ಮ ಸರ್ಕಾರ 34 ರೂ. ಹಣವನ್ನು ಜನರಿಗೆ ನೀಡುತ್ತಿದೆ. ಪ್ರಸ್ತುತ ಕೇಂದ್ರ ಸರ್ಕಾರ ಭಾರತ್ ರೈಸ್ ಅಂತ ಪ್ರಚಾರಕ್ಕಾಗಿ ಕೋಟ್ಯಂತರ ರೂ. ನಷ್ಟ ಮಾಡಿಕೊಂಡು ಜನರಿಗೆ ಅಕ್ಕಿ ನೀಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.