ರಾಜಸ್ಥಾನ, ಫೆ 14 (DaijiworldNews/AA): ಸಾಮಾನ್ಯವಾಗಿ ಯುಪಿಎಸ್ ಸಿ ಪರೀಕ್ಷೆ ಬರೆಯುವ ಕೆಲ ಅಭ್ಯರ್ಥಿಗಳು ಪರೀಕ್ಷೆಗಾಗಿ ತರಬೇತಿ ಪಡೆಯುತ್ತಾರೆ. ಇನ್ನೂ ಕೆಲ ಅಭ್ಯರ್ಥಿಗಳು ಸ್ವಯಂ ಅಧ್ಯಯನದ ಮೂಲಕವೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಹೀಗೆ ಸ್ವಯಂ ಅಧ್ಯಯನದ ಮೂಲಕ ತಮ್ಮ ಮೊದಲನೇ ಪ್ರಯತ್ನದಲ್ಲೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಐಎಎಸ್ ಅಧಿಕಾರಿ ಲಘಿಮಾ ತಿವಾರಿ ಅವರ ಸ್ಪೂರ್ತಿದಾಯಕ ಕಥೆ ಇದು.
ಲಘಿಮಾ ತಿವಾರಿ ಅವರು ಮೂಲತಃ ರಾಜಸ್ಥಾನದ ಅಲ್ವಾರ್ ನವರು. ಲಘಿಮಾ ಅವರು 9 ನೇ ತರಗತಿಯಿಂದ 12 ನೇ ತರಗತಿಯವರೆಗೆ ಜೀವಶಾಸ್ತ್ರದ ಹಿನ್ನೆಲೆಯನ್ನು ಹೊಂದಿದ್ದರು. ನಂತರ 2021 ರಲ್ಲಿ ಅವರು ದೆಹಲಿಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ಅವರು ಯುಪಿಎಸ್ ಸಿ ಪರೀಕ್ಷೆಗಾಗಿ ತಯಾರಿ ಪ್ರಾರಂಭಿಸುತ್ತಾರೆ.
ಯುಪಿಎಸ್ ಸಿ ಪರೀಕ್ಷೆಗಾಗಿ ಯಾವುದೇ ಕೋಚಿಂಗ್ ಪಡೆಯದೆ ಸ್ವಯಂ ಅಧ್ಯಯನದ ಮೂಲಕ ಲಘಿಮಾ ಅವರು ತಯಾರಿ ಪ್ರಾರಂಭಿಸುತ್ತಾರೆ. ಯೂಟ್ಯೂಬ್ ಮತ್ತು ಇತರ ಪ್ಲಾಟ್ ಫಾರ್ಮ್ ಗಳಲ್ಲಿ ಪೋಸ್ಟ್ ಮಾಡಲಾಗಿದ್ದ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳ ಯಶಸ್ಸಿನ ಕಥೆ ಇಂದ ಲಘಿಮಾ ಅವರು ಇನ್ನಷ್ಟು ಸ್ಪೂರ್ತಿ ಪಡೆಯುತ್ತಾರೆ.
ಯುಪಿಎಸ್ ಸಿ ಮುಖ್ಯ ಪರೀಕ್ಷೆಗೆ ಮಾನವಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಆಯ್ಕೆ ಮಾಡಿಕೊಂಡ ಲಘಿಮಾ ಅವರು ತರಬೇತಿ ಪಡೆಯದೆ ಸ್ವಯಂ ಅಧ್ಯಯನವನ್ನು ಪ್ರಾರಂಭಿಸುತ್ತಾರೆ. ಲಘಿಮಾ ಅವರಿಗೆ ಅವರ ಪೋಷಕರು ಉತ್ತಮ ಸಹಕಾರ ನೀಡುತ್ತಿದ್ದರು. ಅವರ ಸಹಕಾರದೊಂದಿಗೆ 2022 ರಲ್ಲಿ ತನ್ನ ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಜೊತೆಗೆ 19 ನೇ ಅಖಿಲ ಭಾರತ ರ್ಯಾಂಕ್ ಅನ್ನು ಕೂಡ ಗಳಿಸುತ್ತಾರೆ.