ಉತ್ತರ ಪ್ರದೇಶ, ಏ 26 (Daijiworld News/MSP):ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಮತ್ತೊಮ್ಮೆ ಆಯ್ಕೆ ಬಯಸಿರುವ ಬಿಜೆಪಿ ಅಭ್ಯರ್ಥಿ, ಹಾಲಿ ಸಂಸದ, ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ತಮ್ಮ ನಾಮಪತ್ರ ಸಲ್ಲಿಸಿದ್ದು, ಇದರಲ್ಲಿ ಸಲ್ಲಿಸಿರುವ ಆಸ್ತಿ ವಿವರ ಇಲ್ಲಿದೆ.
ನರೇಂದ್ರ ಮೋದಿ ಅವರಲ್ಲಿ ನಗದು 38,750 ರೂಪಾಯಿ ಇದ್ದು, ಇದಲ್ಲದೆ ಇವರು ಗಾಂಧಿನಗರದ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ಠೇವಣಿ ರೂಪದಲ್ಲಿರುವ 4,143 ರೂಪಾಯಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಲ್ಲಿ ಎಫ್ ಡಿ 1,27,81,574 ರೂಪಾಯಿಯನ್ನು ಹೊಂದಿದ್ದಾರೆ. ತಾನು ಯಾವುದೇ , ತೆರಿಗೆ ಬಾಕಿ ಹಾಗೂ ಸಾಲವನ್ನು ಹೊಂದಿಲ್ಲ ಎಂದು ತಿಳಿಸಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಆದಾಯದ ಪ್ರಮುಖ ಮೂಲ ಸರ್ಕಾರಿ ಹುದ್ದೆಯ ಗೌರವಧನ ಹಾಗೂ ಬ್ಯಾಂಕಿನ ಬಡ್ಡಿದರ ಎಂದು ತಿಳಿಸಿದ್ದಾರೆ.
ಇದಲ್ಲದೆ ಎಲ್ & ಟಿ ಇನ್ಫ್ರಾಸ್ಟ್ರಕ್ಚರ್ ಬಾಂಡ್ ನಲ್ಲಿ ಆದಾಯ ತೆರಿಗೆ ಉಳಿಸುವ ನಿಟ್ಟಿನಲ್ಲಿ 20 ಸಾವಿರಗಳ ಮೌಲ್ಯದ ಬಾಂಡ್ ಹೊಂದಿದ್ದಾರೆ. ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ ಸರ್ಕಾರಿ ಒಡೆತನದ ಹೂಡಿಕೆಯಲ್ಲಿ 7,61,466 ರೂಪಾಯಿ ಮೌಲ್ಯದ ಬಾಂಡ್ ಹೊಂದಿದ್ದಾರೆ. ಜೊತೆಗೆ ಎಲ್ ಐಸಿಯಲ್ಲಿ 1,90,347 ರೂ ಪಾಲಿಸಿಯನ್ನು ಹೊಂದಿದ್ದಾರೆ.
1,13,800 ರೂಪಾಯಿ ಮೌಲ್ಯದ 45 ಗ್ರಾಂ ಚಿನ್ನವನ್ನು ಹೊಂದಿರುವ ಪ್ರಧಾನಿ 1,10,00,000 ರು ಮೌಲ್ಯ ಸ್ಥಿರಾಸ್ತಿಯನ್ನು ಹೊಂದಿದ್ದಾರೆ. ಇದರಲ್ಲಿ ಗುಜರಾತ್ ನ ಗಾಂಧಿನಗರದ ವಸತಿ ಸಮುಚ್ಚಯದಲ್ಲಿ ಶೇ.25 ರಷ್ಟು ಮೌಲ್ಯದ ಶೇರುಗಳನ್ನು ಹೊಂದಿದ್ದಾರೆ. 1.30,488 ರೂ ಮೌಲ್ಯದ ಫ್ಲಾಟ್ ಹಾಗೂ ನಿರ್ಮಾಣ ಹೂಡಿಕೆ 2,57,208 ರೂ ಮಾಡಿದ್ದಾರೆ.
2017-18ರಲ್ಲಿ 19,92,520 ರೂಪಾಯಿಯನ್ನು ಐಟಿ ರಿಟರ್ನ್ಸ್ ಮಾಡಿದ್ದು, ಪತ್ನಿ ಜಶೋದಾಬೆನ್ ಐಟಿ ರಿಟರ್ನ್ಸ್ ದಾಖಲೆ ವಿವರ ಗೊತ್ತಿಲ್ಲ ಎಂದು ಉಲ್ಲೇಖಿಸಿದ್ದಾರೆ. ಮಾತ್ರವಲ್ಲದೆ ಯಾರು ಅವಲಂಬಿತರಿಲ್ಲ ಎಂದು ಘೋಷಿಸಿಕೊಂಡಿದ್ದಾರೆ.