ಬೆಂಗಳೂರು, ಫೆ 14 (DaijiworldNews/AA): ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬಂದ ಬಳಿಕ ಬೆಂಗಳೂರು ಕ್ರೈಮ್ ಸಿಟಿಯಾಗುತ್ತಿದೆ. ಜೊತೆಗೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಮಾಜಿ ಸಚಿವ ಗೋಪಾಲಯ್ಯ ಅವರಿಗೆ ಬಂದಿರುವ ಕೊಲೆ ಬೆದರಿಕೆಯೇ ಉದಾಹರಣೆ. ಎಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಇರುತ್ತದೋ, ಅಲ್ಲಿಗೆ ಬಂಡವಾಳ ತಾನಾಗಿಯೇ ಹರಿದು ಬರುತ್ತದೆ. ನಮ್ಮ ರಾಜ್ಯದಲ್ಲಿ ಅನೇಕ ಹೂಡಿಕೆ ಬರುತ್ತಿತ್ತು. ಆದರೆ ಈಗ ಹೂಡಿಕೆದಾರರ ಸಂಖ್ಯೆ ಕಡಿಮೆಯಾಗಿದೆ ಎಂದು ಅವರು ಹೇಳಿದರು.
ಕರ್ನಾಟಕವು ದೌರ್ಜನ್ಯ ಪ್ರಕರಣದಲ್ಲಿ 3 ನೇ ಸ್ಥಾನದಲ್ಲಿದ್ದು, ಬೆಂಗಳೂರು ನಂಬರ್ ಒನ್ ಕ್ರೈಮ್ ಸಿಟಿಯಾಗಿದೆ. ಬೆಂಗಳೂರಿನಲ್ಲಿ 438 ಕೋಟಿ ಸೈಬರ್ ವಂಚನೆಯಾಗಿದ್ದು, ಸೈಬರ್ ವಂಚನೆಯಲ್ಲಿ ಬೆಂಗಳೂರು ಮೊದಲ ಸ್ಥಾನದಲ್ಲಿದೆ. ನಮ್ಮ ಸರ್ಕಾರವಿದ್ದಾಗ ಬಾಲ ಮುದುರಿಕೊಂಡಿದ್ದ ಭಯೋತ್ಪಾದಕರು ಇಂದು ಪಿಎಫ್ ಐ ಸಂಘಟನೆಯವರು ಪ್ರಕರಣ ಹಿಂಪಡೆಯುತ್ತಾರೆ ಎಂದು ರಾಜಾರೋಷವಾಗಿ ಓಡಾಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಅಪರಾಧ ಚಟುವಟಿಕೆಗಳು ಹೆಚ್ಚಾಗಿವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.